ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆಯುತ್ತಿರುವ ಬೀದಿಬದಿ ವ್ಯಾಪಾರಿಗಳ ಹೋರಾಟಕ್ಕೆ ಸ್ಪಂದಿಸಿ, ವ್ಯಾಪಾರ ವಹಿವಾಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸದ ರಾಜಶೇಖರ್ ಹಿಟ್ನಾಳ ಅವರಿಗೆ ಬೀದಿ ಬದಿ ವ್ಯಾಪಾರಿಗಳ ಸಂಘ ಹಕ್ಕೊತ್ತಾಯ ಸಲ್ಲಿಸಿದೆ.
ನಗರದ ಪ್ರವಾಸಿ ಮಂದಿರಕ್ಕೆ ಸಂಸದರು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ವ್ಯಾಪಾರಿಗಳು ರಾತ್ರಿ 10 ಗಂಟೆ ವೇಳೆಗೆ ಜಮಾವಣೆಗೊಂಡು ನಗರಸಭೆ ಹಾಗೂ ಕಂದಾಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.
ಕಳೆದ 33 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಯುತ್ತಿದೆ. ಇಲ್ಲಿಯವರೆಗೂ ಯಾರು ನಮ್ಮ ಗೋಳು ಕೇಳುವವರು ಇಲ್ಲ ಎಂದು ಸಂಸದರ ಮುಂದೆ ಅಳಲು ತೋಡಿಕೊಂಡರು. ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಒಂದು ತಿಂಗಳಾಗಿದೆ. ಜೀವನ ನಿರ್ವಹಣೆಗೆ ತುಂಬಾ ಕಷ್ಟಕರವಾಗಿದೆ ಎಂದು ಬೇಸರ ಹೊರಹಾಕಿದರು.
ದಿನನಿತ್ಯದ ಪದಾರ್ಥಗಳ ಬೆಲೆ ಹೆಚ್ಚಾಗುತ್ತಿದೆ. ಇದರ ನಡುವೆ ನಮ್ಮನ್ನು ತೆರವುಗೊಳಿಸಿ ಇನ್ನಷ್ಟು ಅತಂತ್ರದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಕಣ್ಣೀರಿಟ್ಟರು.
ಸಂಸದ ರಾಜ್ ಶೇಖರ್ ಹಿಟ್ನಾಳ ಅವರು ಮಾತನಾಡಿ, “ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿ ಎರಡು ದಿನಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಹೋರಾಟ ಕೈ ಬಿಡಿ” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಸಿಂಧನೂರು ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ
ಈ ವೇಳೆ ಡಿ.ಎಚ್. ಪೂಜಾರ , ವ್ಯಾಪಾರಿಗಳು ಹಾಜರಿದ್ದರು.
