ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮುಖ್ಯೋಪಾಧ್ಯಾಯರನ್ನು ವರ್ಗಾವಣೆ ಮಾಡಿಸುವ ದುರುದ್ದೇಶದಿಂದ ಕಿಡಿಗೇಡಿಗಳು ರೂಪಿಸಿದ ಸಂಚು ಅತ್ಯಂತ ಆಘಾತಕಾರಿಯಾಗಿದೆ. ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿ ಮುಗ್ಧ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿರುವ ಈ ಘೋರ ಕೃತ್ಯವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಕರ್ನಾಟಕ ಘಟಕ ಖಂಡಿಸಿದೆ.
ಕಳೆದ 13 ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯೋಪಾಧ್ಯಾಯರಾದ ಸುಲೇಮಾನ್ ಗೋರಿನಾಯಕ್ ಅವರನ್ನು ಕೇವಲ ಧರ್ಮದ ಕಾರಣಕ್ಕೆ ಗುರಿಯಾಗಿಸಿ, ಅವರನ್ನು ಅಲ್ಲಿಂದ ಸ್ಥಳಾಂತರಿಸಲು 41 ಮುಗ್ಧ ಮಕ್ಕಳನ್ನು ಕೊಲ್ಲಲು ಯತ್ನಿಸಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ. ವಿಷ ಬೆರೆಸಿದ ನೀರನ್ನು ಕುಡಿದು 12 ಮಕ್ಕಳು ಅಸ್ವಸ್ಥರಾಗಿರುವುದು ತೀವ್ರ ಕಳವಳಕಾರಿ ವಿಷಯ ಎಂದು ಎಸ್‌ಐಓ ತಿಳಿಸಿದೆ.
ಒಂದು ನಿರ್ದಿಷ್ಟ ಧರ್ಮದ ಮೇಲಿನ ದ್ವೇಷವು ಮುಗ್ಧ ಮಕ್ಕಳ ಪ್ರಾಣ ತೆಗೆಯುವ ಹೀನ ಮಟ್ಟಕ್ಕೆ ತಲುಪಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ. ಇದು ನಮ್ಮ ಸಮಾಜದಲ್ಲಿ ದ್ವೇಷ ಮತ್ತು ಅಸಹಿಷ್ಣುತೆ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಎಸ್‌ಐಓ ಕಳವಳ ವ್ಯಕ್ತಪಡಿಸಿದೆ.
ಈಗಾಗಲೇ ಪೊಲೀಸರು ಈ ಹೀನಾಯ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಮಾದರಿಯಾಗುವಂತಹ ಶಿಕ್ಷೆ ವಿಧಿಸಬೇಕು. ಅಸ್ವಸ್ಥಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಿ, ಅವರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಎಸ್ ಐ ಓ ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹಯ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
