ಉತ್ತರ ಕನ್ನಡ ಜಿಲ್ಲೆಯ ಶಿರಸಿ –ಸಿದ್ದಾಪುರ ಭಾಗದ ಸಂರಕ್ಷಿತ ಅರಣ್ಯ ಪ್ರದೇಶಗಳಾದ ‘ಸರ್ಕಾರಿ ಬೆಟ್ಟ’ಗಳಲ್ಲಿ ನಡೆಯುತ್ತಿರುವ ಅಕ್ರಮ ಒತ್ತುವರಿ, ಅರಣ್ಯ ನಾಶ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಭೀಮ ಘರ್ಜನೆ ಸಂಘಟನೆಯು ಇಂದು ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ಆರೋಪದಂತೆ, ಜಿಲ್ಲೆಯ ಪರಿಸರ ಮತ್ತು ಅರಣ್ಯ ಸಂಪತ್ತಿನ ಜೀವನಾಡಿಯಾಗಿರುವ ಸರ್ಕಾರಿ ಬೆಟ್ಟಗಳು ಪ್ರಭಾವಿ ವ್ಯಕ್ತಿಗಳ ಅಕ್ರಮ ಚಟುವಟಿಕೆಗಳಿಂದ ಹಾನಿಗೊಳಗಾಗಿದ್ದು, ಅರಣ್ಯದ ಬಹುಭಾಗ ನಾಶದ ಅಂಚಿಗೆ ತಲುಪಿದೆ. ಈ ಅಕ್ರಮಗಳಿಗೆ ಸ್ಥಳೀಯ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಮನವಿಯಲ್ಲಿ ಉಲ್ಲೇಖಿಸಿರುವಂತೆ, ಅರಣ್ಯ ಸಂರಕ್ಷಣಾ ಕಾಯ್ದೆ–1980ರ ಸೆಕ್ಷನ್ 2ರ ಪ್ರಕಾರ ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ. ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳ ಪ್ರಕಾರವೂ ಅರಣ್ಯ ಭೂಮಿಯ ಮೇಲಿನ ಅಕ್ರಮ ಒತ್ತುವರಿಗೆ ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ ಎಂದು ಸಂಘಟನೆ ತಿಳಿಸಿದೆ.
ಸ್ಥಳೀಯ ಆರ್‌ಎಫ್‌ಒ, ಹೆಚ್ಚುವರಿ ಆರ್‌ಎಫ್‌ಒ ಹಾಗೂ ಬೀಟ್ ಗಾರ್ಡ್‌ಗಳು ಅತಿಕ್ರಮಣದಾರರೊಂದಿಗೆ ಶಾಮೀಲಾಗಿ ಅಕ್ರಮ ತೋಟಗಳು, ಕಟ್ಟಡಗಳು, ಬೇಲಿಗಳು ಹಾಗೂ ಗೇಟ್‌ಗಳ ನಿರ್ಮಾಣ ನಡೆದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ಬಗ್ಗೆ ದೂರುಗಳನ್ನು ನೀಡಿದರು ಹಾಗೂ ಲೋಕಾಯುಕ್ತ ತನಿಖೆ ನಡೆಯುತ್ತಿದ್ದರೂ ಸಹ ಕೇವಲ ಸಣ್ಣಪುಟ್ಟ ಪ್ರಕರಣ ದಾಖಲಿಸಿ ಜಾಮೀನು ಸಿಗುವಂತೆ ಮಾಡುತ್ತಿದ್ದಾರೆ ಹಾಗೂ ಅಧಿಕಾರಿಗಳು ಅಕ್ರಮಕಾರರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಯಲ್ಲಾಪುರ | ಸಾತೋಡಿ ಫಾಲ್ಸ್ ಮಾರ್ಗದಲ್ಲಿ ಹುಬ್ಬಳ್ಳಿ ಯುವಕರ ಪುಂಡಾಟ; ಪೋಲಿಸರಿಂದ ಪ್ರಕರಣ ದಾಖಲು
ಲೋಕಾಯುಕ್ತ ತನಿಖೆ ನಡೆಯುತ್ತಿರುವ ನಡುವೆಯೂ ಅತಿಕ್ರಮಣದಾರರು ಹೊಸದಾಗಿ ತಂತಿ ಬೇಲಿ, ಗೇಟ್ ಅಳವಡಿಸುವುದು ಹಾಗೂ ಮರಗಳ ಕಡಿತ ಮುಂದುವರಿಸಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ಬಂದಿದ್ದರೂ ಕಠಿಣ ಕ್ರಮ ಜರುಗಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ಬೇಡಿಕೆಗಳು: ಅಕ್ರಮಗಳಿಗೆ ಸಹಕರಿಸಿದ ಆರೋಪದಡಿ ಸಂಬಂಧಪಟ್ಟ ಆರ್‌ಎಫ್‌ಒ, ಹೆಚ್ಚುವರಿ ಆರ್‌ಎಫ್‌ಒ ಹಾಗೂ ಬೀಟ್ ಗಾರ್ಡ್‌ಗಳನ್ನು ಸೇವೆಯಿಂದ ವಜಾಗೊಳಿಸಬೇಕು.
ಅತಿಕ್ರಮಣದಾರರು ಹಾಗೂ ಅವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್ 24 ಮತ್ತು 73 ಸೇರಿದಂತೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಬೇಕು.
ಸೆಕ್ಷನ್ 94–A ಅಡಿಯಲ್ಲಿ ಎಲ್ಲಾ ಅಕ್ರಮ ಬೇಲಿ, ಗೇಟ್ ಹಾಗೂ ಕಟ್ಟಡಗಳನ್ನು ತೆರವುಗೊಳಿಸಿ ಸರ್ಕಾರಿ ಬೆಟ್ಟಗಳನ್ನು ಇಲಾಖೆಯ ವಶಕ್ಕೆ ಪಡೆಯಬೇಕು.
ಅರಣ್ಯ ಭೂಮಿಯ ಮೇಲಿನ ಎಲ್ಲಾ ಅಕ್ರಮ ಒತ್ತುವರಿಗಳನ್ನು ತುರ್ತಾಗಿ ತೆರವುಗೊಳಿಸಿ ಅರಣ್ಯ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು, ಎಂದು ತಮ್ಮ ಪ್ರಮುಖ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮುಂದಿನ 15 ದಿನಗಳೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸಿ ಒತ್ತುವರಿ ತೆರವುಗೊಳಿಸದಿದ್ದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಹಾಗೂ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಳಿಸುವುದಾಗಿ ಭೀಮ ಘರ್ಜನೆ ಸಂಘಟನೆ ಎಚ್ಚರಿಕೆ ನೀಡಿದೆ.





