ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಿದ 12ನೇ ತರಗತೆಯ ಉತ್ತರ ಪತ್ರಿಕೆಗಳ ಪರಿಶೀಲನೆಯಲ್ಲಿ ಅಡಚಣೆಗಳಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ, ಪತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಪ್ರಕ್ರಿಯೆಗಾಗಿ ಪೋರ್ಟಲ್‌ಅನ್ನು ಸಿಬಿಎಸ್‌ಐ ತೆರೆದಿದೆ. ಪೋರ್ಟಲ್ ತೆರೆದ ಕೆಲವೇ ಗಂಟೆಗಳಲ್ಲಿ ಸುಮಾರು 40 ಸಾವಿರ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಡಿಜಿಟಲ್ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ ಆನ್-ಸ್ಕ್ರೀನ್ ಮಾರ್ಕಿಂಗ್ ವ್ಯವಸ್ಥೆಯಲ್ಲಿ ಉಂಟಾದ ಲೋಪ ಹಾಗೂ ತಾಂತ್ರಿಕ ಅಡಚಣೆಗಳ ವಿರುದ್ಧ ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ, ಹೊಸ ಪೋರ್ಟಲ್‌ಅನ್ನು ಸಿಬಿಎಸ್‌ಐ ತೆರೆದಿದೆ. ಈ ಹಿಂದೆ, ಮೇ 29 ರೊಳಗೆ ಅರ್ಜಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಂಡಳಿ ತಿಳಿಸಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ದಿನಾಂಕಕ್ಕಿಂತ ತಡವಾಗಿ, ಜೂನ್ 2ರಂದು ಅಧಿಕೃತ ಪೋರ್ಟಲ್ ಅನ್ನು ತೆರೆಯಲಾಗಿದೆ.
ಆದಾಗ್ಯೂ, ಮರುಮೌಲ್ಯಮಾಪನ ಸೌಲಭ್ಯವು ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಿರುವುದಿಲ್ಲ. ಈಗಾಗಲೇ ಮೌಲ್ಯಮಾಪನ ಮಾಡಲಾಗಿರುವ ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆದುಕೊಂಡು, ಅದರಲ್ಲಿ ವ್ಯತ್ಯಾಸಗಳನ್ನು ಗುರುತಿಸಿರುವ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಪೋರ್ಟಲ್ ಜೂನ್ 2 ರಿಂದ ಜೂನ್ 6ರ ಮಧ್ಯರಾತ್ರಿಯವರೆಗೆ ಮಾತ್ರ ತೆರೆದಿರಲಿದೆ. ನಿಗದಿತ ಗಡುವಿನ ನಂತರ ಸಲ್ಲಿಸುವ ಯಾವುದೇ ರೀತಿಯ ಆಫ್‌ಲೈನ್ ಅರ್ಜಿಗಳು ಅಥವಾ ವಿನಂತಿಗಳನ್ನು ಮಂಡಳಿ ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ ಎಂದು ಹೇಳಿದೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ ಮೂಲಕ ಲಾಗಿನ್ ಆಗಬೇಕಾಗುತ್ತದೆ. ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲೇ ನಡೆಸಲಾಗುತ್ತಿದೆ. ಒದಗಿಸಲಾದ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯಲ್ಲಿ ಕಂಡುಬರುವ ದೋಷಗಳ ಪರಿಶೀಲನೆಗಾಗಿ ಪ್ರತಿ ಉತ್ತರ ಪತ್ರಿಕೆಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಒಂದು ವೇಳೆ ಉತ್ತರಗಳನ್ನೇ ಮರುಮೌಲ್ಯಮಾಪನ ಮಾಡಬೇಕಾದರೆ ಪ್ರತಿ ಪ್ರಶ್ನೆಗೆ 25 ರೂಪಾಯಿಗಳಂತೆ ಶುಲ್ಕ ವಿಧಿಸಲಾಗುತ್ತದೆ. ವಿದ್ಯಾರ್ಥಿಗಳು ಅಗತ್ಯವಿರುವ ಪ್ರಶ್ನೆ ಸಂಖ್ಯೆ ಮತ್ತು ಪುಟ ಸಂಖ್ಯೆಯ ವಿವರಗಳನ್ನು ಒದಗಿಸುವ ಮೂಲಕ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವಿಷಯಗಳ ಪ್ರಶ್ನೆಗಳ ಮರುಮೌಲ್ಯಮಾಪನಕ್ಕೆ ಆನ್‌ಲೈನ್‌ನಲ್ಲಿ ಮನವಿ ಮಾಡಬಹುದು ಎಂದು ಮಂಡಳಿ ತಿಳಿಸಿದೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಡಿಜಿಟಲ್ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮಂಡಳಿಯು ಸ್ಟೇಟ್ ಬ್ಯಾಂಕ್ ಆಫ್ ಇಂಟಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ಇಂಡಿಯನ್ ಬ್ಯಾಂಕ್‌ಗಳ ಪೇಮೆಂಟ್ ಗೇಟ್‌ವೇಗಳನ್ನು ಒದಗಿಸಿದೆ. ಈ ಸೌಲಭ್ಯವನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಅಥವಾ ಪೋಷಕರು ಕಡ್ಡಾಯವಾಗಿ ಈ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರಬೇಕು ಎಂದೇನೂ ಇಲ್ಲ. ಹಣ ಪಾವತಿಸಲು ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಸೇರಿದಂತೆ ಲಭ್ಯವಿರುವ ಯಾವುದೇ ಆನ್‌ಲೈನ್ ಆಯ್ಕೆಗಳನ್ನು ಬಳಸಬಹುದು. ಆನ್‌ಲೈನ್ ಪಾವತಿ ಸಂಪೂರ್ಣವಾಗಿ ಯಶಸ್ವಿಯಾದ ನಂತರವೇ ಅರ್ಜಿಯನ್ನು ಅಧಿಕೃತವಾಗಿ ಸ್ವೀಕರಿಸಲಾಗುತ್ತದೆ ಎಂದು ಸಿಬಿಎಸ್‌ಐ ತಿಳಿಸಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಜಾಗರೂಕರಾಗಿರಬೇಕು. ಅರ್ಜಿ ಭರ್ತಿ ಮಾಡುವಾಗ ಒಮ್ಮೆ ‘ಫ್ರೀಜ್ ಮತ್ತು ಪ್ರೊಸೀಡ್ ಟು ಪೇಮೆಂಟ್’ ಬಟನ್ ಕ್ಲಿಕ್ ಮಾಡಿದರೆ ವಿವರಗಳು ಲಾಕ್ ಆಗುತ್ತವೆ. ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಬ್ಮಿಟ್ ಮಾಡುವ ಮುನ್ನ ಎಲ್ಲ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ವೆಬ್‌ಸೈಟ್‌ನಲ್ಲಿ ದೃಶ್ಯ ಮಾರ್ಗದರ್ಶಿ ಮತ್ತು ಟ್ಯುಟೋರಿಯಲ್ ವಿಡಿಯೋವನ್ನು ಒದಗಿಸಲಾಗಿದ್ದು, ಸರಿಯಾದ ಮಾಹಿತಿಗಾಗಿ ಕೇವಲ ಅಧಿಕೃತ ಸಿಬಿಎಸ್‌ಇ ಪ್ರಕಟಣೆಗಳನ್ನು ಮಾತ್ರ ನಂಬುವಂತೆ ಮಂಡಳಿ ಮನವಿ ಮಾಡಿದೆ.




