ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿಹಾಕಿಕೊಂಡ ಶಿರಸಿಯ ಪ್ರಗತಿ ನಗರದ ನಿವಾಸಿಯೊಬ್ಬರು ಬರೋಬ್ಬರಿ ₹89.90 ಲಕ್ಷ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರಸಿಯ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರವೀಂದ್ರ ಕೃಷ್ಣ ಹೆಗಡೆ ಎಂಬುವವರಿಗೆ ಅಪರಿಚಿತ ವ್ಯಕ್ತಿಗಳಿಂದ ವಾಟ್ಸ್‌ಪ್ ವೀಡಿಯೊ ಕರೆ ಬಂದಿದೆ ಕರೆ ಮಾಡಿದವರು ತಮ್ಮನ್ನು ಮುಂಬೈ ಕೊಲಾಬಾ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಹೆಗಡೆ ಅವರ ಖಾತೆಗೆ ಕಪ್ಪು ಹಣದ ವ್ಯವಹಾರ ನಡೆದಿದೆ, ನಿರ್ದಿಷ್ಟವಾಗಿ ಜೆಟ್ ಏರ್‌ವೇಸ್‌ನ ಮನೀಶ್ ಗೋಯಲ್ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅವರ ಮೇಲೆ ಕಪ್ಪು ಹಣ ಮತ್ತು ಮನಿ ಲಾಂಡರಿಂಗ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಬೆದರಿಕೆಗಳಿಗೆ ಹೆದರಿದ ರವೀಂದ್ರ ಹೆಗಡೆ, ಸೈಬರ್ ವಂಚಕರ ಸೂಚನೆಗಳಿಗೆ ಮಣಿದು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ವರ್ಗಾಯಿಸಿದ್ದಾರೆ. ಶಿರಸಿ ನಗರದ ಕೆನರಾ ಬ್ಯಾಂಕ್, ಅಶ್ವಿನಿ ಸರ್ಕಲ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಖಾತೆಗಳಿಂದ ಒಟ್ಟು ₹89,90,000 ಹಣವನ್ನು ಸೈಬರ್ ವಂಚಕರು ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ.
ವಂಚನೆಗೆ ಒಳಗಾದ ನಂತರ ರವೀಂದ್ರ ಹೆಗಡೆ ಅವರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ, ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಈ ವಂಚನೆ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಂಡು ತಮ್ಮ ಹಣವನ್ನು ಮರಳಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ನಡೆಯುವ ಅಂತಾರಾಷ್ಟ್ರೀಯ ಶೃಂಗಸಭೆಗೆ ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಆಯ್ಕೆ
ಸೈಬರ್ ಅಪರಾಧಗಳಿಂದ ಜಾಗರೂಕರಾಗಿರಿ: ಯಾವುದೇ ಬ್ಯಾಂಕ್ ಅಥವಾ ಸರ್ಕಾರಿ ಸಂಸ್ಥೆಗಳು ದೂರವಾಣಿ ಕರೆ, SMS ಅಥವಾ ವೀಡಿಯೊ ಕರೆ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು, OTP ಅಥವಾ ಪಾಸ್‌ವರ್ಡ್‌ಗಳನ್ನು ಕೇಳುವುದಿಲ್ಲ. ಇಂತಹ ಕರೆಗಳು ಬಂದಾಗ ತಕ್ಷಣವೇ ಸಂಪರ್ಕ ಕಡಿತಗೊಳಿಸಿ, ಯಾವುದೇ ಕಾರಣಕ್ಕೂ ಹಣ ವರ್ಗಾವಣೆ ಮಾಡಬೇಡಿ ಮತ್ತು ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ದೂರು ದಾಖಲಿಸಿ ನಿಮ್ಮನ್ನು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಿ.