ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಒಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಬಂಧಿತರನ್ನು ಹಾವೇರಿ ಜಿಲ್ಲೆ ಹಾನಗಲ್‌ನ ಬಸವರಾಜ ಫಕೀರಪ್ಪ ಗೊಲ್ಲರ (38), ಹಾಗೂ ಸುಜಾತಾ ಬಸವರಾಜ್ ಗೊಲ್ಲರ (31) ಎಂದು ಗುರುತಿಸಲಾಗಿದೆ. ಆದರೆ, ಇನ್ನೊಬ್ಬ ಆರೋಪಿ ಪಾಂಡುರಂಗ ನಾರಾಯಣ ನಾಯ್ಕ (54) ಎಂಬಾತ ಪರಾರಿಯಾಗಿದ್ದಾನೆ.
ಶಿರಸಿ ನಗರ ಠಾಣೆಯ ಪಿಎಸ್‌ಐ ನಾಗಪ್ಪ ಬಿ. ಅವರ ನೇತೃತ್ವದಲ್ಲಿ ಪೊಲೀಸರ ತಂಡವು ನಿಲೇಕಣಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಮಹೀಂದ್ರಾ ಬೊಲೆರೋ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ವಾಹನದಲ್ಲಿದ್ದ 2 ಆಕಳು, 2 ಹೋರಿ ಕರು ಮತ್ತು 1 ಆಕಳು ಕರು ಸೇರಿ ಒಟ್ಟು 5 ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಶಿರಸಿಯಲ್ಲಿ ಇಬ್ಬರು ಬಾಲಕಿಯರು ನಾಪತ್ತೆ: ಪೊಲೀಸರ ತೀವ್ರ ಶೋಧ
ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಬಸವರಾಜ ಗೊಲ್ಲರ ಮತ್ತು ಸುಜಾತಾ ಗೊಲ್ಲರ ಅವರನ್ನು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಬೊಲೆರೋ ವಾಹನ ಮತ್ತು ಅಂದಾಜು 19,500 ರೂ. ಮೌಲ್ಯದ 5 ಜಾನುವಾರುಗಳನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಚನ್ನಬಸಪ್ಪ ಕ್ಯಾರಕಟ್ಟಿ, ಸುನಿಲ್, ರಾಜಶೇಖರ್, ಹನುಮಂತ್ ಕಬಾಡಿ, ಜ್ಯೋತಿ ನಾಯಕ ಎಂ ಮತ್ತು ಸುದರ್ಶನ ನಾಯ್ಕ ಪಾಲ್ಗೊಂಡಿದ್ದರು.