ಶಿರಸಿ ಪಟ್ಟಣದ ಹೊರವಲಯದಲ್ಲಿರುವ ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗಸಾಲ ಗ್ರಾಮದ ವಿ.ಆರ್.ಆರ್ ಹೋಂ ಸ್ಟೇ ಬಳಿ ಇಸ್ಪೀಟ್ ಆಟ ಅಡ್ಡದ ಮೇಲೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿ, 19 ಜನರನ್ನು ಬಂಧಿಸಿ, 49 ಲಕ್ಷದ 50 ಸಾವಿರ ನಗದು ಸೇರಿದಂತೆ ಲಕ್ಷಂತಾರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 23ರ ರಾತ್ರಿ 8:45ರ ಸುಮಾರಿಗೆ ಅಕ್ರಮವಾಗಿ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಗ್ರಾಮೀಣ ಠಾಣಾ ಪೊಲೀಸರು, ರಾತ್ರಿ 9:45ಕ್ಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ 19 ಮಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು.
ದಾಳಿಯ ವೇಳೆ ಜಮಖಾನಗಳು, 52 ಇಸ್ಪೀಟ್ ಎಲೆಗಳು, ಲಕ್ಷಾಂತರ ಮೌಲ್ಯದ ನಾಲ್ಕು ಕಾರುಗಳು ಹಾಗೂ 15ಕ್ಕೂ ಹೆಚ್ಚಿನ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆಪಾದಿತರನ್ನು ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೇರಿದವರಾದ ಅನಿಲಕುಮಾರ್ ಜಿ.ಆರ್ (30), ಭೀರಪ್ಪ (42), ಬೀರೇಶ್ (26), ಶಂಕರಗೌಡ ಪಾಟೀಲ್ (48), ನಾಗರಾಜ (44), ಪ್ರದೀಪ (48), ಪ್ರಶಾಂತ (35), ಜಬಿವುಲ್ಲಾ (38), ರೇವಣಸಿದ್ದಯ್ಯ (45), ಈಶಪ್ಪ (40), ಪ್ರಕಾಶ (44), ಮಲ್ಲಿಕಾರ್ಜುನ (40), ಬಸವರಾಜ ಜಿ.ಆರ್ (41), ಚಮನಸಾಬ್ (39), ಬಸವರಾಜ (35), ಈರಣ್ಣ (38), ಸಂತೋಷ (31), ವೀರಬಸಪ್ಪ (45), ಮತ್ತು ಚೇತನ ಎನ್ (36) ಎಂದು ಗುರುತಿಸಲಾಗಿದೆ.
ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ಕಾರಿನ ಮೇಲೆ ಮರ ಬಿದ್ದು ಮಹಿಳೆ ಸಾವು
ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಕೃಷ್ಣಮೂರ್ತಿ ಕೆ.ಎಸ್.ಪಿ.ಎಸ್, ಜಗದೀಶ ಎಂ. ಕೆ.ಎಸ್.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ, ಶಿರಸಿ ಉಪವಿಭಾಗದ ಡಿ.ವೈ.ಎಸ್.ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಅಶೋಕ ಆರ್ ರಾಠೋಡ ಮತ್ತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಎ.ಎಸ್.ಐ ಪ್ರದೀಪ ರೇವಣಕರ, ಸಂತೋಷ ಕಮಟಗೇರಿ, ರಾಘವೇಂದ್ರ ಜಿ, ಗಣಪತಿ ಪಟಗಾರ, ಷಣ್ಮುಖ ಮಿರಾಶಿ, ರವಿ ಉಕ್ಕಡಗಾತ್ರಿ. ಭರತಕುಮಾರ, ಮಾರುತಿ ಗೌಡ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಕೋಟ್ರೇಶ ನಾಗರವಳ್ಳಿ. ಅಣ್ಣಪ್ಪ ಬುಡಗೇರಿ ಹಾಗೂ ಚಾಲಕರಾದ ಕೃಷ್ಣ ರೇವಣಕರ, ಮೌಲಾಲಿ ಮರಗಡಿ ಇವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.