ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ದಾಸನಕೊಪ್ಪದ ಬಳಿ ಇರುವ ಚಿನ್ನದ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದು, ಕಳುವಾಗಿದ್ದ ಒಟ್ಟು 2.23 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಇಮ್ರಾನ್ ಗಫಾರ್ ಇಕ್ಕೇರಿ(25), ಇಮ್ರಾನ್ ತಾಜುದ್ದೀನ್ ರಮಣೇದಾರ(22) ಮತ್ತು ಭಟ್ಕಳ ನಿವಾಸಿ ಅಮೀರ್ ಹಸನ್ ಬೇರಿ(27) ಎಂದು ಬಂಧಿತರನ್ನು ಗುರುತಿಸಲಾಗಿದೆ.
ಜುಲೈ 12ರ ರಾತ್ರಿ 8ರಿಂದ ಜುಲೈ 13ರ ಬೆಳಿಗ್ಗೆ 7:30ರ ನಡುವೆ ಕಳ್ಳರು ದಾಸನಕೊಪ್ಪದ ಜೀವನ ಶೇಟ್ ಎಂಬುವವರ ಮಾವನವರ ಮನೆ ಮೂಲಕ, ಅವರ ಅಂಗಡಿಯ ಮೇಲ್ಛಾವಣಿ ಒಡೆದು ಒಳನುಗ್ಗಿ ಕಳ್ಳತನ ಮಾಡಿದ ಕುರಿತು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡಲೇ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ವಿದೇಶಿ ಮಾದರಿಯ 127 ಮೂಗುತಿಗಳು(10 ಗ್ರಾಂ 320 ಮಿಲಿ, ಅಂದಾಜು ಮೌಲ್ಯ ₹83,000), ಹೊಸ ಬೆಳ್ಳಿಯ ಆಭರಣಗಳಾದ ದೇವರ ಮೂರ್ತಿಗಳು, ಕಾಲು ಉಂಗುರಗಳು, ದೇವರ ಮೀಸೆ, ದೇವರ ಹಸ್ತ ಮತ್ತು ಇತರೆ ದೇವರ ಚಿತ್ರಗಳಿರುವ ಬೆಳ್ಳಿ ಆಭರಣಗಳು(ಒಟ್ಟು 900 ಗ್ರಾಂ, ಅಂದಾಜು ಮೌಲ್ಯ ₹90,000) ಹಾಗೂ ಹಳೆಯ ಬೆಳ್ಳಿಯ ಆಭರಣಗಳಾದ ಕಾಲು ಚೈನುಗಳು, ಕಾಲು ಪಿಲ್ಲೆ, ಕಾಲು ಕಡಗಗಳು, ಕಾಲು ಉಂಗುರಗಳು ಮತ್ತು ಇತರೆ ಬೆಳ್ಳಿ ಆಭರಣಗಳು(ಒಟ್ಟು 746 ಗ್ರಾಂ, ಅಂದಾಜು ಮೌಲ್ಯ ₹50,500) ಸೇರಿದಂತೆ ಒಟ್ಟಾರೆ ₹2,23,500 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ ಜಿಲ್ಲಾ ಕೋರ್ಟ್ ಸಂಕೀರ್ಣಗಳಲ್ಲಿ ಸ್ವಚ್ಚತಾ ಕಾರ್ಯಕ್ಕೆ ಟೆಂಡರ್: ಏಜನ್ಸಿಗಳಿಂದ ಅರ್ಜಿ ಆಹ್ವಾನ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ಐಪಿಎಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ-2 ಜಗದೀಶ್ ನಾಯ್ಕ್ ಮತ್ತು ಶಿರಸಿ ಉಪವಿಭಾಗದ ಡಿಎಸ್‌ಪಿ ಗೀತಾ ಪಿ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಶಿರಸಿ ವೃತ್ತ ನಿರೀಕ್ಷಕ ಶಶಿಕಾಂತ್ ವರ್ಮಾ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಮಹಾಂತಪ್ಪ ಕುಂಬಾರ ಮತ್ತು ಸುನೀಲ್ ಕುಮಾರ್ ಬಿ ವೈ ಹಾಗೂ ಸಿಬ್ಬಂದಿಗಳಾದ ಅಬ್ದುಲ್ ಸಮ್ಮದ್ ಅನ್ಸಾರಿ, ಕುಮಾರ್ ಬಣಕಾರ, ಬಸವರಾಜ ಜಾಡರ್, ಮಂಜಪ್ಪ ಪಿ, ರಾಜೇಶ ಪಿ ಎಂ, ದಿವಾನ ಅಲಿ, ಮಹಾದೇವಪ್ಪ ವಾಲಿಕಾರ, ರೇವಪ್ಪ ಬಂಕಾಪುರ ಮತ್ತು ಸಂಚಾರ ಠಾಣೆ ಶಿರಸಿ ಸಿಡಿಆರ್ ವಿಭಾಗದ ಉದಯ ಗುನಗಾ ಅವರು ಕಾರ್ಯಾಚರಣೆಯಲ್ಲಿ ಇದ್ದರು.