ತಾಲೂಕಿನ ನಿವೇಶನರಹಿತರಿಂದ ಸಾವಿರಕ್ಕೂ ಅಧಿಕ ನಿವೇಶನ ಅರ್ಜಿಗಳು ಬಂದಿದ್ದು, ಅತೀ ಶೀಘ್ರದಲ್ಲೇ ನಿವೇಶನರಹಿತ ಬಡವರಿಗೆ ನಿವೇಶನಗಳನ್ನು ವಿತರಿಸಲಾಗುವುದು ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಭರವಸೆ ನೀಡಿದರು.
ಬಾಗೇಪಲ್ಲಿ ತಾಲೂಕಿನ ಕಸಬಾ ಹೋಬಳಿ ಘಂಟಮವಾರಂಪಲ್ಲಿ ಗ್ರಾಪಂ ವ್ಯಾಪ್ತಿಯ ಕೊಡಿಕೊಂಡ ರಸ್ತೆ ಬಳಿ ಇರುವ ಆಶ್ರಯ ಬಡಾವಣೆಯ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಸಂಜೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ನಿವೇಶನರಹಿತ ಬಡವರಿದ್ದಾರೆ. ಅವರಿಂದ ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು, ನಿವೇಶನಗಳಿದ್ದವರೂ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಅರ್ಜಿಗಳನ್ನು ಪರಿಶೀಲಿಸಿ ನೈಜ ಫಲಾನುಭವಿಗಳಿಗೆ ಪಾತಬಾಗೇಪಲ್ಲಿ ಸಮೀಪ ಮತ್ತಿತರ ಕಡೆ ನಿಗದಿಪಡಿಸಿದ ನಿವೇಶನಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಕ್ರಿಸ್‌ಮಸ್ ; ಜಿಲ್ಲಾದ್ಯಂತ ಚರ್ಚ್‌ಗಳಲ್ಲಿ ಸಡಗರ, ಸಂಭ್ರಮ
ಶೀಘ್ರದಲ್ಲೆ ಬಡಾವಣೆಗೆ ಮತ್ತಷ್ಟು ಸೌಲಭ್ಯ :
ಸುಮಾರು 25 ಲಕ್ಷ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲಾಗಿದ್ದು, ಬೀದಿ ದೀಪಗಳ ವ್ಯವಸ್ಥೆಯೂ ಅರ್ಧಭಾಗಕ್ಕೆ ಅನುಕೂಲ ಮಾಡಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಚರಂಡಿ ಸೇರಿದಂತೆ ಉಳಿದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಬಾಗೇಪಲ್ಲಿ, ಚೇಳೂರು, ಗುಡಿಬಂಡೆ ಮೂರು ತಾಲ್ಲೂಕುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಮುಖ್ಯವಾಗಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ರೈತರಿಗೆ, ವ್ಯಾಪಾರಸ್ತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಓಡಾಡಲು ತುಂಬಾ ಅನುಕೂಲವಾಗುತ್ತದೆ. ಕ್ಷೇತ್ರದ ಎಲ್ಲಾ ಗ್ರಾಮಗಳ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಾಬಾಸಾಹೇಬರು ಮನುಸ್ಮೃತಿಯನ್ನು ಸುಟ್ಟ ದಿನ
ಈ ವೇಳೆ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ, ಸದಸ್ಯರಾದ ಶ್ರೀನಿವಾಸರೆಡ್ಡಿ, ಶಭಾನ, ಘಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಹಿರಿಯ ಮುಖಂಡರಾದ ಸೋಮಶೇಖರ್, ಮನ್ಸೂರ್, ಜೆಇ ಸೊಮಶೇಖರ್, ಗುತ್ತಿಗೆದಾರ ಶಂಕರಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್. ನಾಗಪ್ಪ, ನಿಜಾಮುದ್ದೀನ್ ಬಾಬು, ಆರೀಫ್, ಮಹಮದ್ ನೂರುಲ್ಲಾ ಸೇರಿದಂತೆ ಹಲವರು ಹಾಜರಿದ್ದರು.