ಹೈಕೋರ್ಟ್‌ನ ಆರು ಮಂದಿ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿ, ₹50 ಲಕ್ಷಕ್ಕೆ ಬೇಡಿಕೆ ಇಟ್ಟು ಕಿಡಿಗೇಡಿಯೊಬ್ಬ ವಾಟ್ಸಾಪ್‌ನಲ್ಲಿ ಸಂದೇಶ ಕಳಿಸಿದ್ದಾನೆ ಎಂದು ತಿಳಿದುಬಂದಿದೆ.
ಆರು ಮಂದಿ ಹೈಕೋರ್ಟ್ ನ್ಯಾಯಾಧೀಶರು ಮಾತ್ರವಲ್ಲದೆ, ಸಾರ್ವಜನಿಕ ಸಂಪರ್ಕ ಅಧಿಕಾರಿಗೂ ಜೀವ ಬೆದರಿಕೆ ಸಂದೇಶ ಬಂದಿದ್ದು, ಅಪರಿಚಿತ ಆರೋಪಿ ವಿರುದ್ಧ ಕೇಂದ್ರ ಸಿಇಎನ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಮುರಳೀಧರ್, ನ್ಯಾಯಮೂರ್ತಿ ಮೊಹಮ್ಮದ್ ನವಾಜ್, ನ್ಯಾಯಮೂರ್ತಿ ಎಚ್.ಟಿ ನರೇಂದ್ರ ಪ್ರಸಾದ್, ನಿವೃತ್ತ ನ್ಯಾಯಮೂರ್ತಿ ಅಶೋಕ್ ಜಿ ನಿಜಗಣ್ಣವರ್, ನ್ಯಾಯಮೂರ್ತಿ ಎಚ್.ಪಿ ಸಂದೇಶ್, ನ್ಯಾಯಮೂರ್ತಿ ಕೆ. ನಟರಾಜನ್ ಮತ್ತು ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ಬೆದರಿಕೆಯ ಸಂದೇಶ ಬಂದಿದೆ. ಹಿಂದಿ, ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಜುಲೈ 12ರಂದು ಜೀವ ಬೆದರಿಕೆಯ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಜಮೆ ಮಾಡಬೇಕಾದ ಖಾತೆಯ ಸಂಖ್ಯೆಯನ್ನೂ ಸಹ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.