ಚಿಕ್ಕಬಳ್ಳಾಪುರ | ಓಬವ್ವಳಂತಹ ಆಳಿನ ಚರಿತ್ರೆ ಮಾತನಾಡಲಾಗದು : ಉಪನ್ಯಾಸಕ ಎಂ ಮುನಿರಾಜು

Date:

Advertisements

ರಾಜ ಮಹಾರಾಜರ ಬಗ್ಗೆ ಬರೆದ ಜನಪ್ರಿಯ ಚರಿತ್ರೆಗಳ ಬಗ್ಗೆ ಮಾತನಾಡಿದಷ್ಟು ಸರಳವಾಗಿ ಓಬವ್ವನಂತಹ ಆಳಿನ ಚರಿತ್ರೆಯ ಬಗ್ಗೆ, ಅಂಚಿನ ವರ್ಗದವರ ಚರಿತ್ರೆ ಬಗ್ಗೆ ಮಾತನಾಡಲಾಗದು ಎಂದು ಉಪನ್ಯಾಸಕ ಅರಿಕೆರೆ ಎಂ ಮುನಿರಾಜು ಹೇಳಿದರು.

ಚಿಕ್ಕಬಳ್ಳಾಪುರ ನಗರದ ಜೈಭೀಮ್ ವಸತಿ ನಿಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವಿಶೆಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಏಕಾಂಗಿಯಾಗಿ ಹೋರಾಡಿ ಹೈದರಾಲಿ ಸೈನಿಕರನ್ನು ಸದೆಬಡಿಯುವ ಮೂಲಕ ಚಿತ್ರದುರ್ಗದ ಕೋಟೆಯ ಮಾನ, ಪ್ರಾಣವನ್ನು ರಕ್ಷಿಸಿದ ಧೀರ ಮಹಿಳೆ ಒನಕೆ ಓಬವ್ವ ಸ್ವಾಮಿನಿಷ್ಟೆಯ ಪ್ರತೀಕವಷ್ಟೇ ಅಲ್ಲದೆ ಛಲವಾದಿ ಸಮುದಾಯದ ಧೃವತಾರೆಯಾಗಿದ್ದಾರೆ ಎಂದು ಹೇಳಿದರು.

Advertisements
ಓಬವ್ವ 1

ರಾಜನಿಷ್ಠೆ, ನಾಡಪ್ರೇಮ, ಸಮಯಪ್ರಜ್ಞೆ, ಅಪರಿಮಿತ ದೈರ್ಯ, ಸಾಹಸ, ತ್ಯಾಗದ ಪ್ರತೀಕವಾಗಿ ಚರಿತ್ರೆಯಲ್ಲಿ ಓಬವ್ವ ಕಾಣಿಸಿಕೊಂಡಿದ್ದಾಳೆ. ಈಕೆಯ ಕಾಲ 1754-1779 ಆಗಿದ್ದು ಹೈದರಾಲಿ ಕೋಟೆಯನ್ನು ವಶಮಾಡಿಕೊಳ್ಳಲು ಪದೇ ಪದೇ ದಾಳಿ ಮಾಡಲು ತೊಡಗುವ ಸಂದರ್ಭದಲ್ಲಿ ಆ ಸೈನ್ಯಕ್ಕೆ ತಕ್ಕ ಪಾಠ ಕಲಿಸುವ ಮೂಲಕ ಚರಿತ್ರೆಯಲ್ಲಿ ಆಳಿಗೂ ಸ್ಥಾನವಿದೆ ಎಂದು ತೋರಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಓಬವ್ವಳದಾಗಿದೆ ಎಂದರು.

5ನೇ ಮದಕರಿ ನಾಯಕನ ಆಡಳಿತದಲ್ಲಿ ಕೋಟೆಕಾವಲು ಕಾಯಕದ ಮುದ್ದಹನುಮಪ್ಪನ ಮಡದಿಯಾದ ಈ ವೀರವನಿತೆ ಓಬವ್ವ. ದುರ್ಗದ ಕೋಟೆಯಲ್ಲಿದ್ದ ೩೫ಕ್ಕೂ ಹೆಚ್ಚು ಗುಪ್ತದ್ವಾರಗಳಿದ್ದು ಇವುಗಳನ್ನು ಕಾಯಲು ಕಹಳೆಯ ಕಾಯಕದ ಮೂಲಕ ಸೇವೆಸಲ್ಲಿಸುತ್ತಿದ್ದ ವಂಶದ ಸೊಸೆಯಾಗಿದ್ದಾಳೆ. ಇಂತಹ ಮಹತ್ವದ ಕಾಯಕದಲ್ಲಿದ್ದ ಓಬವ್ವನ ಕುಟುಂಬದ ಮೇಲೆ ವೀರಮದಕರಿಗೆ ಅಪಾರ ವಿಶ್ವಾಸ ಇತ್ತು. ಇದನ್ನು ಸಾಬೀತುಪಡಿಸಿದ್ದೇ ಕಳ್ಳಗಿಂಡಿಯ ಪ್ರಸಂಗವಾಗಿದೆ ಎಂದರು.

ಓಬವ್ವ ಹೈದರನ ಸೈನಿಕನಿಂದ ಸಾಯಲಿಲ್ಲ! :

ಕಥೆ, ಕಾದಂಬರಿಗಳಲ್ಲಿ, ಸಿನಿಮಾದಲ್ಲಿ ತೋರಿಸಿದಂತೆ ಹೈದರಾಲಿಯ ಸೈನಿಕನ ಒಳೇಟಿಗೆ ಗುರಿಯಾಗಿ ಈಕೆ ಸಾಯುವುದಿಲ್ಲ. ಹೈದರಾಲಿ ಸೈನ್ಯಕ್ಕೆ ಸೋಲುಣಿಸಿದ ನಂತರದಲ್ಲಿ ಎರಡು ವರ್ಷಗಳ ಕಾಲ ಓಬವ್ವ ಬದುಕಿದ್ದಳೆಂಬ ಮಾತುಗಳೂ ಇವೆ ಎಂದರು.

ಓಬವ್ವನನ್ನು ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕನಿಗೆ ಹೋಲಿಸುವುದು ಸರಿಯಲ್ಲ. ಇವರು ಹೋರಾಟ ಮಾಡಿದ್ದು ರಾಜ್ಯ, ಕೋಶಕ್ಕಾಗಿ. ಪಟ್ಟ, ಪದವಿ ಉಳಿಸಿಕೊಳ್ಳುವ ಕಾರಣಕ್ಕಾಗಿ. ಆದರೆ ಒನಕೆ ಓಬವ್ವ ಹೋರಾಡಿದ್ದು, ತನ್ನ ಕಾಯಕಕ್ಕೆ ಕಳಂಕಬರಬಾರದು, ತನ್ನ ದಣಿಗೆ ಸೋಲಾಗಬಾರದು, ಕೋಟೆ ಹೈದರಾಲಿ ವಶವಾಗಬಾರದು ಎಂಬ ನಿಸ್ವಾರ್ಥವಾದ ನಾಡಪ್ರೇಮಕ್ಕಾಗಿ. ಹೀಗಾಗಿ ಇವರೆಲ್ಲರಿಗಿಂತ ಪ್ರಾಮಾಣಿಕತೆ, ನಿಷ್ಠೆ, ನಿಯತ್ತಿನಲ್ಲಿ ಓಬವ್ವಳದು ತುಂಬಾ ಮೇಲುಸ್ತರದಲ್ಲಿ ನಿಲ್ಲುವ ವ್ಯಕ್ತಿತ್ವವಾಗಿದೆ ಎಂದು ಬಣ್ಣಿಸಿದರು.

ಇತಿಹಾಸಕಾರ ಪ್ರೊ.ಲಕ್ಷ್ಮಣ ತೆಲಗಾವಿ, ತಮ್ಮ ಕೃತಿ ಚಿತ್ರದುರ್ಗದ ಒನಕೆ ಓಬವ್ವ ಚಾರಿತ್ರಿಕ ವಿವೇಚನೆಯಲ್ಲಿ ತಿಳಿಸುವಂತೆ ಈಕೆಯ ಸಾಹಸವನ್ನು ಕೇಳಿದ ವೀರಮದಕರಿ ಆಸ್ಥಾನಕ್ಕೆ ಬರಮಾಡಿಕೊಂಡು ಗೌರವಪೂರ್ವಕವಾಗಿ ಸತ್ಕರಿಸಿದ್ದಲ್ಲದೆ ನಿನಗೇನು ಬೇಕು ಕೇಳಿಕೋ ಎನ್ನುತ್ತಾನೆ. ಆಗ ಒಬವ್ವ ನನಗೆ ಸಂಪತ್ತು ಬೇಡ, ಬಿರುದು ಬಾವಲಿ ಏನೂ ಬೇಡ, ನನ್ನ ಮರಣಾನಂತರ ನನ್ನ ವಂಶಸ್ಥರಿಗೆ ನಾನು ಕುಲದೇವತೆಯಾಗಿರುವೆನೆಂತಲೂ, ತನ್ನ ವಾರ್ಷಿಕ ಉತ್ಸವಗಳಿಗೆ ಎಪ್ಪತ್ತೇಳು ಬಿರುದು ಬಹುಮಾನ ಹಿಡಿಯಲು ಅನುಮತಿ ನೀಡಬೇಕು ಎಂತಲೂ, ಪುರ ಪ್ರಮುಖ ಪ್ರಜೆಗಳಿಂದ ಶಕ್ತ್ಯಾನುಸಾರ ಕಾಣಿಕೆ ಕೊಡಬೇಕು ಎಂತಲೂ, ಪ್ರತಿ ಶುಭ ಮುಹೂರ್ತದಲ್ಲಿ ನನ್ನ ಹೆಸರಿನಿಂದ ವಂಶಸ್ಥರಿಗೆ ವೀಳ್ಯ ಕೊಡಬೇಕು ಎಂದೂ ಬಿನ್ನವಿರಿಸಿಕೊಳ್ಳುತ್ತಾಳೆ.

ಸಂದೇಹಕ್ಕೆಡೆ ಮಾಡುವ ಶಿಲಾಶಾಸನ ನಾಪತ್ತೆ?

ಇದಕ್ಕೆಲ್ಲಾ ಒಪ್ಪುವ ಅರಸ ವೀರಮದಕರಿ ನಿಮ್ಮ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುವೆ ತಾಯಿ ಎಂದು ಹೇಳಿದ್ದಲ್ಲದೆ ತಾವೇ ಸ್ವಯಂಪ್ರೇರಣೆಯಿಂದ ಅಗಸನಕಲ್ಲು ಗ್ರಾಮವನ್ನು ಕೂಡ ಜಹಗೀರಾಗಿ ಕೊಟ್ಟು ಇದನ್ನು ತಾಮ್ರ ಮತ್ತು ಶಿಲಾ ಶಾಸನದಲ್ಲಿ ಬರೆಸುತ್ತಾನೆ. ಆದರೆ ಈ ತಾಮ್ರ ಪತ್ರ, ಶಿಲಾಶಾಸನ ಈವರೆಗೆ ಯಾವ ಇತಿಹಾಸಕಾರರ ಕೈಗೂ ದೊರೆಯದಿರುವುದು ನೋಡಿದರೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ದಲಿತ ಹೆಣ್ಣು ಮಗಳ ಚರಿತ್ರೆಯನ್ನು ಮರೆಮಾಚುವ ಕಾರಣಕ್ಕೆ ಹೀಗೆ ಮಾಡಲಾಯಿತೇ ಎಂಬ ಸಂದೇಹಕ್ಕೆಡೆ ಮಾಡಿಕೊಡುತ್ತದೆ ಎಂದರು.

ಆಪತ್ತಿನ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಓಬವ್ವ ಉತ್ತಮ ನಿದರ್ಶನವಾಗಿದ್ದಾಳೆ. ಸಾಮಾನ್ಯ ಗೃಹಿಣಿಯಾದರೂ ಯೋಧರಂತೆ ಮೆರೆದ ಶೌರ್ಯ, ತೋರಿದ ಸಾಹಸ ರಾಜರನ್ನೂ ನಿಬ್ಬೆರಗಾಗಿಸುವಂತಹುದು. ಇದೇ ಕಾರಣಕ್ಕೆ ರಾಜರು ಈಕೆಯ ಹೆಣವನ್ನು ದುರ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಈಕೆಯ ಸಾಹಸವನ್ನು ಕೊಂಡಾಡುತ್ತಾ ಕೋಟೆಯ ತಣ್ಣೀರು ಚಿಲುಮೆಯ ಪೂರ್ವ ದಿಕ್ಕಿನಲ್ಲಿ ಈಕೆಯನ್ನು ಸಮಾಧಿ ಮಾಡುತ್ತಾರೆ ಎಂದು ತಿಳಿಸಿದರು.

ಹೀಗೆ ದಲಿತ ಸಮುದಾಯದ ಅದರಲ್ಲೂ ಛಲವಾದಿ ಸಮುದಾಯದ ಹೆಣ್ಣು ಮಕ್ಕಳು ಓಬವ್ವನಂತೆ ವೀರ ನಾಯಕಿಯರಾಗಿ ಬಾಳುತ್ತಾ, ಸಮಾಜ ಒಪ್ಪುವ ರೀತಿಯಲ್ಲಿ ಮಾದರಿಯಾದ ಬದುಕನ್ನು ಬದುಕಿ, ಬಾಬಾ ಸಾಹೇಬರು ಹಾಕಿಕೊಟ್ಟ ವೈಚಾರಿಕ, ವೈಜ್ಞಾನಿಕತೆಯ ಬೆಳಕಲ್ಲಿ ಸಾಗಬೇಕು. ಸಮುದಾಯ ಪ್ರಜ್ಞೆಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ ಎಂಬುದನ್ನು ಮನಗಾಣಬೇಕಿದೆ ಎಂದು ಸಲಹೆ ನೀಡಿದರು.

ಈ ವೇಳೆ ಸಮುದಾಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸನ್ಮಾನಿಸಿದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಲ್ಲಕ್ಕಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಪಿಎನ್ ರವೀಂದ್ರ, ಜಿ.ಪಂ. ಸಿಇಒ ಪ್ರಕಾಶ್ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧೀಕಾರಿ ಆರ್.ಅಶ್ವಿನ್, ತಹಶೀಲ್ದಾರ್ ಅನಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಡಿ.ಎಂ.ರವಿಕುಮಾರ್, ಸಮುದಾಯ ಮುಖಂಡರಾದ ಜಿ.ಸಿ.ವೆಂಕಟರೋಣಪ್ಪ, ಸುಧಾ ವೆಂಕಟೇಶ್, ವೆಂಕಟ್, ಮಮತಾ ಮೂರ್ತಿ, ನರಸಿಂಹಪ್ಪ, ಜಿ.ಸಿ.ವೆಂಕಟೇಶ್, ಪಾಳ್ಯಕೆರೆ ವೆಂಕಟೇಶ್, ಕೃಷ್ಣಪ್ಪ, ರಾಮಕೃಷ್ಣ, ನಾರಾಯಣಶ್ವಾಮಿ, ಪ್ರಕಾಶ್, ಹರೀಶ್, ಅಭಿ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

Download Eedina App Android / iOS

X