“ಜಗತ್ತನ್ನು ಜ್ಞಾನ ಸಂಪತ್ತು ಇಂದು ಆಳುತ್ತಿದೆ. ಸಂಘಟಿಸುವ ಇತರೆ ಸಂಪತ್ತುಗಳಿಗಿಂತ ಜ್ಞಾನ ಬಹಳ ಮುಖ್ಯವಾಗಿದೆ. ಹಾಗಾಗಿ, ಸ್ಲಂ ವಿದ್ಯಾಥಿಗಳು ಬೌದ್ಧಿಕ ಜ್ಞಾನದ ಕಡೆ ಹೆಚ್ಚು ಆದ್ಯತೆ ನೀಡಬೇಕು” ಎಂದು ಸ್ಲಂ ಜನಾಂದೋಲನ ಕರ್ನಾಟಕ ವೇದಿಕೆಯ ಜನಾರ್ದನ ಹಳ್ಳಿಬೆಂಚಿ ಹೇಳಿದರು.
ರಾಯಚೂರು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ 2023-24 ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಸ್ಲಂ ನಿವಾಸಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರತಿಭಾನ್ವಿತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸ್ಲಂ ವಿದ್ಯಾರ್ಥಿಗಳು ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲದಿದ್ದರೂ ಹೆಚ್ಚು ಅಂಕಗಳನ್ನು ಪಡೆಯಲು ಪ್ರೋತ್ಸಾಹಿಸಿದ್ದೇವೆ . ವಂಚಿತ ಸಮುದಾಯದಲ್ಲಿ ಶಿಕ್ಷಣದ ಜಾಗೃತಿ ಹೆಚ್ಚಾಗದೆ ಇದಕ್ಕೆ ಪೋಷಕರು ಸಹ ಕಾರಣೀಕರ್ತರಾಗಿದ್ದಾರೆ ಎಂದರು.
ಸ್ಲಂ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಿಂದಲೇ ದೊಡ್ಡ ಕನಸು ನುಚ್ಚು ನೂರಾಗುತ್ತಿದೆ. ನಮ್ಮ ವಿದ್ಯಾರ್ಥಿಗಳಿಗೆ ಉನ್ನತ ಸ್ಥಾನಕ್ಕೆ ಜಾತಿ, ಬಡತನ ಹಾಗೂ ಸ್ಲಂ ಜನರು ಎಂದು ಕಳಂಕ ಅಡ್ಡಿಯಾಗುತ್ತಿದೆ. ಈ ಚಿಂತನೆಯಿಂದ ಮಕ್ಕಳು ಹೊರಬರಬೇಕು ಎಂಬ ಉದ್ದೇಶಕ್ಕೆ ಹಲವಾರು ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಸಾಗಿದ್ದೇವೆ ಎಂದು ಜನಾರ್ದನ ಹಳ್ಳಿಬೆಂಚಿ ತಿಳಿಸಿದರು.
ಮನಸ್ಸಿನಲ್ಲಿ ಕೀಳರಿಮೆಯನ್ನು ಮೊದಲು ಬಿಡಬೇಕು. ಇದರಿಂದ ನಾವು ಘನತೆಯ ಸ್ವಾಭಿಮಾನದ ಜೀವನ ನಡೆಸಬಹುದು. ನಮ್ಮ ವಿವೇಚನೆ ಶಿಕ್ಷಣದಿಂದ ಮಾತ್ರ ಸಾಧ್ಯ.ವಿದ್ಯಾರ್ಥಿಗಳು ಹೆಚ್ಚಾಗಿ ಹೊಸ ಆವಿಷ್ಕಾರಗಳ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಇದನ್ನು ಓದಿದ್ದೀರಾ? ತುಮಕೂರು | ಒಟಿಎಸ್‌ಗೆ ಅವಕಾಶ ನೀಡದೆ ಟ್ರ್ಯಾಕ್ಟರ್ ಹರಾಜು : ಬ್ಯಾಂಕ್ ಕ್ರಮ ವಿರೋಧಿಸಿ ಆ. 12ಕ್ಕೆ ರೈತ ಸಂಘದಿಂದ ಪ್ರತಿಭಟನೆ
ಮುಖಂಡರುಗಳಾದ ನಗರಸಭೆ ಸದಸ್ಯ ಮಣಿಕಂಠ , ಖಾನಾಪುರ ಗ್ರಾಮ ಪಂಚಾಯತ್ ಸದಸ್ಯ ಶಾಲಂಸಾಬ ,ಅನಿಲ ಕುಮಾರ್ , ಯಮನಪ್ಪ , ಬಸವರಾಜ್ ಹೊಸೂರ , ಮಾಧವರೆಡ್ಡಿ, ಮಹೇಶ , ಚಂದ್ರು ,ಪ್ರವೀಣ , ಪವನ, ಎಸ್ ರಾಜು , ನಿತಿನ್ ,ಇನ್ನಿತರರು ಉಪಸ್ಥಿತರಿದ್ದರು.
