ಫೋಟೋಗಳು ಸಮಾಜದಲ್ಲಿ ಅರಿವು ಮೂಡಿಸುವ, ಹೊಸ ತಿಳುವಳಿಕೆ ಕೊಡುವ, ಪ್ರಜ್ಞೆಯ ದಾರಿಯಾಗಿವೆ. ಸಮಾಜ, ರಾಜಕಾರಣ, ಸಂಸ್ಕೃತಿಯ ಸಂಗತಿಗಳನ್ನು ಒಳಗೊಂಡ ಫೋಟೋಗಳು ಸಾಂಸ್ಕೃತಿಕ ರಾಜಕಾರಣದ ಭಾಗವೂ ಆಗಿವೆ ಎಂದು ಬೆಂಗಳೂರಿನ ಲೇಖಕ, ಪತ್ರಕರ್ತ ಸಹ್ಯಾದ್ರಿ ನಾಗರಾಜ ಹೇಳಿದರು.
ಬಸವಕಲ್ಯಾಣದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಸಹಯೋಗದಲ್ಲಿ ʼಚಿತ್ರಗಳು ಮಾತನಾಡುತ್ತವೆ’ ಚಿತ್ರ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಪ್ರತಿಷ್ಠಾನದ 82ನೇ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ‘ಪ್ರತಿಯೊಂದು ಫೋಟೋಗಳಿಗೂ ಹಲವು ಕತೆಗಳಿರುತ್ತವೆ. ಅದನ್ನು ಗ್ರಹಿಸುವ ಧಾನ್ಯಸ್ಥ ಸ್ಥಿತಿ ಇರಬೇಕಾದ ಅಗತ್ಯ ಇದೆ’ ಎಂದರು.
‘ನಮ್ಮಲ್ಲಿ ಕತೆ ಕೇಳುವ, ಹಾಡು ಹೇಳುವ ಜನಪದ ಪರಂಪರೆ ಇದೆ. ಹಾಗೆಯೇ ಭಿತ್ತಿ ಚಿತ್ರ, ಪ್ರತಿಮೆಗಳ ಕೆತ್ತುವ, ನೋಡುವ ಚಿತ್ರ ಪರಂಪರೆಯು ಇದೆ. ತಾಂತ್ರಿಕತೆಗಳ ಬೆಳವಣಿಗೆಯಿಂದ ಫೋಟೋಗ್ರಾಫಿ ಪರಿಕರಗಳಾಗಿ ಪಡೆದಿದ್ದೇವೆ. ಸಂಸ್ಕೃತಿ, ರಾಜಕಾರಣ, ಲೋಕದ ಭಾಗವಾಗಿ, ಸಂಶೋಧನೆಯ ಸಮರ್ಥನೆಗೆ ಆಕರವಾಗಿ ಫೋಟೋ ಬಳಸುತ್ತೇವೆ. ಸಮಾಜ, ಸಂಸ್ಕೃತಿಯ ದಾಖಲೆಯಾಗಿ ಶಕ್ತಿಯುತ ಮಾಧ್ಯಮವಾಗಿ ಫೋಟೋ ಮತ್ತು ವಿಡಿಯೋಗಳು ಕೆಲಸ ಮಾಡುತ್ತವೆ’ ಎಂದರು.
‘ಹಳ್ಳಿಯ ಬಡತನ, ಹಸಿವು, ಕಷ್ಟ, ತಕರಾರು, ಪ್ರೀತಿ, ಹೋರಾಟ, ನಗರದ ಧಾವಂತವನ್ನು, ಅಲ್ಲಲ್ಲಿ ಸಿಗುವ ಮನುಷ್ಯತ್ವವನ್ನು ಫೋಟೋಗಳ ಮೂಲಕ ದಾಟಿಸಬಹುದು. ಒಂದು ಫೋಟೋ ಪ್ರಭುತ್ವದ ಪಲ್ಲಟವೂ ಮಾಡುವ ಹಾಗೂ ಸಮಾಜದ ಬೆಳವಣಿಗೆ ಮಾಡುವ ಸಾಧ್ಯತೆಯು ಹೊಂದಿದೆ. ಫೋಟೋ, ವಿಡಿಯೋ ಸರಿಯಾದ ಕ್ರಮದಲ್ಲಿ ಬಳಸುವ ಅಗತ್ಯವಿದೆ. ಸಾಮಾಜಿಕ ಮತ್ತು ವೈಯಕ್ತಿಕ ಪರಿಕರಗಳಾಗಿ ಫೋಟೋ, ವಿಡಿಯೋ ಬಳಕೆಯಾಗುತ್ತವೆ’ ಎಂದರು
‘ಮಾಧ್ಯಮಗಳನ್ನು, ಸರ್ಕಾರಗಳನ್ನು ಹಾಗೂ ಈ ಕಾಲದ ಎಲ್ಲವನ್ನು ಅನುಮಾನದಿಂದ ನೋಡುವ ಸಂದರ್ಭದಲ್ಲಿ ನಾವಿದ್ದೇವೆ. ಮಾಧ್ಯಮ ಮತ್ತು ಸರ್ಕಾರಗಳನ್ನು ವಿಮರ್ಶಿಸುವ ಕೆಲಸ ನಡೆಯಬೇಕು. ದಾರಿಯಲ್ಲಿ ನಡೆದು ಹೋಗುವಾಗ ಅದೆಷ್ಟೋ ಫೋಟೋಗಳು ಸಿಗುತ್ತವೆ ಅದನ್ನು ನೋಡುವ ಧ್ಯಾನಸ್ಥ ಸ್ಥಿತಿ ಬೇಕು’ ಎಂದು ವಿಶ್ಲೇಷಿಸಿದರು.

ಪ್ರತಿಷ್ಠಾನದ ನಿರ್ದೇಶಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ‘ಫೋಟೋಗಳು ಹಿಂಸೆ, ಕ್ರೌರ್ಯ, ಯುದ್ಧದ ಸನ್ನಿವೇಶ, ಹಾಗೂ ಯುದ್ಧದ ಪರಿಣಾಮಗಳ ಬಗೆಗೆ ಹೇಳುತ್ತವೆ. ಪ್ರಭುತ್ವದ ಸೋಲು, ಸವಾಲು ಹಾಗೂ ಸಾಧ್ಯತೆಗಳ ಕುರಿತು ಮಾತನಾಡುತ್ತವೆ. ಪ್ರಕೃತಿಯ ವಿಸ್ಮಯಗಳನ್ನು, ಅಚ್ಚರಿಗಳನ್ನು ದಾಖಲಿಸುವ ದಾರಿಗಳಾಗಿವೆ. ಒಂದು ಕ್ಷಣದಲ್ಲಿ ಒಂದು ಕಾಲದ, ಒಂದು ಸಂದರ್ಭದ ಹಲವು ಮುಖಗಳನ್ನು ತೋರಿಸುವ ಶಕ್ತಿ ಚಿತ್ರಗಳಿಗಿದೆ’ ಎಂದರು.
‘ಕನ್ನಡ ಸಾಹಿತ್ಯದ ಜತೆಗೆ ಫೋಟೋಗ್ರಾಫಿಗೆ ಅನನ್ಯ ನಂಟಿದೆ. ಸಾಹಿತಿಗಳಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಕೃಪಾರಕರ-ಸೇನಾನಿ ಸೇರಿದಂತೆ ಹಲವರು ಸೆರೆಹಿಡಿದ ಫೋಟೋಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಿವೆ. ಸಾಹಿತ್ಯದ ಶಬ್ದಬಿಂಬದಲ್ಲಿ ಸಮಾಜದ ಮುಖವನ್ನು ಕಾಣುತ್ತೇವೆ. ಹಲವು ಫೋಟೋಗಳು ಮತ್ತು ವಿಡಿಯೋಗಳು ಈ ಲೋಕದ ದೃಶ್ಯ ಕಾವ್ಯಗಳಾಗಿವೆ. ಕೆಲವು ಚಿತ್ರಗಳು ಸಂಘರ್ಷ, ಹೋರಾಟ, ಸಂದಿಗ್ಧದ ಛಾಯೆಗಳಾಗಿವೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಅಶೋಕ ಕುಮಾರ ವಣಗೀರೆ ಮಾತನಾಡಿ, ‘ತಂತ್ರಜ್ಞಾನವನ್ನು ಹೆಚ್ಚು ಕಲಿತರು ಅದನ್ನು ಬಳಸುವ ಪ್ರಜ್ಞೆ ಹೊಂದಿರಬೇಕು. ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿಗೆ ಹಲವು ಕ್ಷೇತ್ರಗಳ ಜ್ಞಾನ ಅಗತ್ಯ’ ಎಂದರು.
ಜಾನಪದ ಕಲಾವಿದ ರೇವಣ್ಣಸಿದ್ದಪ್ಪ ಸೂಗೂರ ಅವರು ಜನಪದ ಮತ್ತು ತತ್ವಪದಗಳನ್ನು ಹಾಡಿ ರಂಜಿಸಿದರು. ಬಳಿಕ ಪತ್ರಕರ್ತರಾದ ಸಹ್ಯಾದ್ರಿ ನಾಗರಾಜ ಮತ್ತು ಬಾಲಾಜಿ ಕುಂಬಾರ ಅವರು ವಿದ್ಯಾರ್ಥಿಗಳಿಗೆ ಕಾಲೇಜಿನ ಕ್ಯಾಂಪಸ್‌ನಲ್ಲಿ ಫೋಟೋಗ್ರಾಫಿ ಕುರಿತು ತರಬೇತಿ ನೀಡಿ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಉಪ ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ್, ಪತ್ರಕರ್ತ ಬಾಲಾಜಿ ಕುಂಬಾರ, ಶಿವಲಿಂಗಯ್ಯಾ ಸ್ವಾಮಿ, ಗಂಗಾಧರ ಸಾಲಿಮಠ ಮೊದಲಾದವರಿದ್ದರು. ಡಾ.ಸಂಜುಕುಮಾರ ಜಲ್ದೆ ಸ್ವಾಗತಿಸಿದರು. ರೆಜಿಸ್ಟರ್ ಪ್ರೇಮಸಾಗರ ಪಾಟೀಲ ನಿರೂಪಿಸಿ, ವಂದಿಸಿದರು.