ಕರ್ನಾಟಕ ರಾಜ್ಯ ಕಂಡ ಸರಳ ಸಜ್ಜನಿಕೆಯ ರಾಜಕಾರಣಿ ಶಾಂತವೇರಿ ಗೋಪಾಲಗೌಡರಂಥವರು ಕಟ್ಟಿದ ಶಿವಮೊಗ್ಗದ ಸಮಾಜವಾದಿ ಕೋಟೆಯಲ್ಲಿ ಸಮಾನತೆಯ ಸಮಾಜವನ್ನು ವಿರೋಧಿಸುವ ಮನುವಾದಿ ಮತ್ತು ಕೋಮುವಾದಿ ಶಕ್ತಿಗಳ ಪ್ರವೇಶವಾಗಿರುವುದರಿಂದ ಹೊಸ ತಲೆಮಾರಿನಲ್ಲಿ ಸಮಾಜವಾದಿ ವಿಚಾರಗಳ ಪ್ರಭಾವ ಕುಂದುತ್ತಿದೆ.
ಪ್ರಪಂಚದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಸರ್ಕಾರವಿರುವ ನಮ್ಮ ದೇಶ ಹಾಗೂ ರಾಜ್ಯಗಳಲ್ಲಿ ಸರ್ಕಾರ ಮತ್ತು ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಗಮವಾಗಿ ನಡೆಯಲಿ ಎಂದು ಸದುದ್ದೇಶದಿಂದ ಬಿಆರ್ ಅಂಬೇಡ್ಕರ್ ಹಾಗೂ ಅವರ ತಂಡವು ರಚಿಸಿದ ಭಾರತದ ಸಂವಿಧಾನದ ವಿಧಿ ವಿಧಾನಗಳು ಇಂದು ಅಪಾಯದಲ್ಲಿವೆ. ಸಮಾಜವಾದ ಸಿದ್ಧಾಂತ ನುಚ್ಚು ನೂರಾಗುತ್ತಿದೆ. ಮರಿ ಸಮಾಜವಾದಿಗಳು, ಜಾತಿ ಸಮಾಜವಾದಿಗಳು ಹುಟ್ಟಿಕೊಂಡು ನಿಜವಾದ ಸಮಾಜವಾದ ಹಿನ್ನೆಲೆಗೆ ಸರಿಯುತ್ತಿದೆ.
ಹೌದು. ಒಂದು ಕಾಲದಲ್ಲಿ ಸಮಾಜವಾದದ ತವರಾಗಿದ್ದ ಶಿವಮೊಗ್ಗ ಜಿಲ್ಲೆ ಇಂದು ಮನುವಾದ ಹಾಗೂ ಕೋಮುವಾದಿಗಳ ಬಿಗಿಮುಷ್ಠಿಯಲ್ಲಿ ನಲುಗುತ್ತಿರುವುದಕ್ಕೆ ಪ್ರಮುಖ ಕಾರಣಗಳೇನು ಎನ್ನುವುದರ ಮೂಲಗಳನ್ನು ಕೆದಕುತ್ತಾ ಹೋದರೆ, ಕೆಲವು ಪ್ರಮುಖ ಅಂಶಗಳು ಕಂಡುಬರುತ್ತವೆ.
60-70ರ ದಶಕದಲ್ಲಿ ಭಾರತದ ರಾಜಕೀಯ ಪರಿಸ್ಥಿತಿ ಇಂದಿಗಿಂತ ಭಿನ್ನವಾಗಿತ್ತು. ಈಗ ಬಿಜೆಪಿ ಎಂದು ಕರೆಯಲ್ಪಡುವ ಆಗಿನ ಜನಸಂಘ ಈಗಿನಷ್ಟು ಪ್ರಬಲವಾಗಿರಲಿಲ್ಲ.ಕಾಂಗ್ರೆಸ್ ಪಕ್ಷ ಆಡಳಿತದಲ್ಲಿತ್ತು. ಕಮ್ಯುನಿಸ್ಟ್ ಮತ್ತು ಸೋಷಿಯಲಿಸ್ಟ್ ಪಕ್ಷಗಳು ಮುಖ್ಯ ವಿರೋಧ ಪಕ್ಷಗಳಾಗಿದ್ದವು. ರಾಮ್ ಮನೋಹರ್ ಲೋಹಿಯಾರವರ ಅತಿಯಾದ ಕಾಂಗ್ರೆಸ್ ವಿರೋಧಿ ರಾಜಕಾರಣ ಕೊನೆಗೆ ಅವರ ಪಕ್ಷವನ್ನೇ ಮುಳುಗಿಸುವ ಹಂತಕ್ಕೆ ಸಾಗಿತ್ತು. ಲೋಹಿಯಾ ಅವರ ಶಿಷ್ಯರಾಗಿದ್ದ ಗೋಪಾಲಗೌಡರಿಗೆ ಇದೆಲ್ಲ ಗೊತ್ತಿತ್ತು. ಗೋಪಾಲಗೌಡರು ಕಾಂಗ್ರೆಸ್ ಪಕ್ಷವನ್ನು ವಿರೋಧ ಮಾಡಿದರೂ ಅವರು ಸಂಘ ಪರಿವಾರದ ಕೋಮುವಾದವನ್ನು ಒಪ್ಪುತ್ತಿರಲಿಲ್ಲ. ಈ ಬಗ್ಗೆ ತಮ್ಮ ಒಡನಾಡಿಗಳ ಜೊತೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದರು. ಇನ್ನೇನೂ ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದ ಸಿದ್ಧಾಂತವು ಗಟ್ಟಿಯಾಗಿ ನೆಲೆಯೂರಬಹುದು ಎನ್ನುವಷ್ಟರಲ್ಲಿ ಗೌಡರು ತೀರಿಕೊಂಡಿದ್ದರು.
ಆ ನಂತರದಲ್ಲಿ ಪ್ರಮುಖವಾಗಿ ಸಮಾಜವಾದ ಸಿದ್ದಾಂತದಲ್ಲಿ ಗುರುತಿಸಿಕೊಂಡ ಎಸ್ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪನವರು ಆ ಕಾಲದಲ್ಲಿ ಬಹಳ ಶಕ್ತಿಶಾಲಿ ರಾಜಕಾರಣಿಗಳಾಗಿದ್ದರು. ಅಂದಿನ ಚುನಾವಣೆಗಳಲ್ಲಿ ಹಣವಿಲ್ಲದೇ ಚುನಾವಣೆಗಳಲ್ಲಿ ಸಮಾಜವಾದ ಸಿದ್ದಾಂತದ ನಾಯಕರುಗಳು ಜಯ ಗಳಿಸುತ್ತಿದ್ದರು. ಪ್ರಮುಖವಾಗಿ ಆ ಕಾಲದಲ್ಲಿ ಮತದಾರರು ಪ್ರಾಮಾಣಿಕರಾಗಿದ್ದರು. ಶಾಂತವೇರಿ ಗೋಪಾಲಗೌಡರಂಥವರು ಬರಿಗೈಲಿ ಸ್ಪರ್ಧಿಸಿ, ಬದರಿನಾರಾಯಣ ಅಯ್ಯಂಗಾರರಂತಹ ದೊಡ್ಡ ಭೂಮಾಲೀಕನನ್ನು ಸೋಲಿಸುವ ಮೂಲಕ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದರು. ಅವರು ಮಾತ್ರವಲ್ಲ, ಆ ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷದ ಕೃಷ್ಣ ಶೆಟ್ಟರು, ಬಿ.ವಿ.ಕಕ್ಕಿಲ್ಲಾಯರು, ಎಂ.ಎಸ್ ಕೃಷ್ಣನ್, ಪಂಪಾಪತಿ ಅಂಥವರು ವಿಧಾನಸಭೆ ಪ್ರವೇಶಿಸುವ ಅವಕಾಶವಿತ್ತು.
ಆದರೆ, ಈಗ ಚುನಾವಣೆಗೆ ಜನಸಾಮಾನ್ಯರ ನಡುವೆ ಕೆಲಸ ಮಾಡುವವರು ಸ್ಪರ್ಧಿಸಲು ಸಾಧ್ಯವಿಲ್ಲ. ಕೋಟಿ ಕೋಟಿ ರೂ. ಇಲ್ಲದಿದ್ದರೆ ಚುನಾವಣೆಯ ಉಸಾಬರಿಗೆ ಯಾರೂ ಹೋಗಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಅಂತೆಯೇ ಗಣಿಗಾರಿಕೆಯ ಖದೀಮರು, ರಿಯಲ್ ಎಸ್ಟೇಟ್ ಧಣಿಗಳು, ಶಿಕ್ಷಣದ ವ್ಯಾಪಾರಿಗಳು, ಖಾಸಗಿ ಆಸ್ಪತ್ರೆಗಳ ಮಾಫಿಯಾದವರು ಚುನಾವಣಾ ಕಣದಲ್ಲಿ ವಿಜೃಂಭಿಸುತ್ತಿದ್ದಾರೆ.
2004ರಲ್ಲಿ ಸಮಾಜವಾದ ಸಿದ್ದಾಂತದ ಎಸ್ ಬಂಗಾರಪ್ಪ ಬಿಜೆಪಿ ಪಕ್ಷ ಸೇರುವ ಮೂಲಕ ಜಿಲ್ಲೆಯಲ್ಲಿ ಸಮಾಜವಾದವು ಮನುವಾದದೊಂದಿಗೆ ಮೈತ್ರಿ ಮಾಡಿಕೊಂಡಂತಾಯಿತು ಎನ್ನಬಹುದು. ಏಕೆಂದರೆ ಎಸ್ ಬಂಗಾರಪ್ಪ ನವರ ಶಕ್ತಿ ಅಷ್ಟಿತ್ತು ಆ ಕಾಲದಲ್ಲಿ.
2006-07ರಲ್ಲಿ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಕೆಲವೇ ದಿನಗಳಲ್ಲಿ ಅವರ ಕುಟುಂಬ ಆರ್ಥಿಕವಾಗಿ ಸಬಲವಾಗುತ್ತಾ ಹೋಯಿತು. ಆ ನಂತರದಲ್ಲಿ ಜಿಲ್ಲೆಯಲ್ಲಿ ನಡೆದ ಚುನಾವಣೆಯ ಚಿತ್ರಣವೇ ಬದಲಾಯಿತು. ಚುನಾವಣಾ ಸಂದರ್ಭದಲ್ಲಿ ಒಂದು ಪ್ಯಾಕೆಟ್‌ನಲ್ಲಿ ಇದ್ದ ಒಂದು ವೋಟನ್ನು ಗರಿಗರಿ ನೋಟಿನ ಕಡೆಗೆ ತಿರುಗಿಸುವಲ್ಲಿ ಆ ಕುಟುಂಬದ ಪಾತ್ರ ಪ್ರಮುಖವಾದುದು ಎನ್ನಬಹುದು. ನಿರೀಕ್ಷೆಗೂ ಮೀರಿದ ಆರ್ಥಿಕವಾಗಿ ಸಬಲರಾದ ಒಂದು ಕುಟುಂಬ, ಆ ನಂತರದ ಚುನಾವಣೆಗಳಲ್ಲಿ ಹಣದ ಹೊಳೆಯನ್ನೇ ಹರಿಸಿ ಜಿಲ್ಲೆಯ ಮತದಾನದ ಚಿತ್ರಣವನ್ನೇ ಬದಲಾಯಿಸಿಬಿಟ್ಟರು ಎನ್ನಬಹುದು.
ಆ ನಂತರ ನಡೆದ ಚುನಾವಣೆಗಳನ್ನು ಒಮ್ಮೆ ಗಮನಿಸಿದರೆ ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತಹ ಮುತ್ಸದ್ಧಿ ರಾಜಕಾರಣಿಗಳು ಹಣದ ಹೊಳೆಯ ಮುಂದೆ ಚುನಾವಣೆ ನಡೆಸಲು ಸಾಧ್ಯವಾಗದೇ ಸೋತಿದ್ದಾರೆ. ಆದರೆ ಈ ಸೋಲು ಭ್ರಷ್ಟಾಚಾರದ ಹಣದ ಹೊಳೆಯಿಂದಲೇ ಹೊರತು, ಸಮಾಜವಾದದ ಸೋಲಲ್ಲ ಎಂಬುವುದನ್ನು ಅರಿತುಕೊಳ್ಳಲೇಬೇಕು.
ಶಿವಮೊಗ್ಗ ಜಿಲ್ಲೆಯ ಪ್ರಬುದ್ಧ ಮತದಾರರು ಹಾಗೂ ನಾಗರಿಕರು ಮಂಗಳೂರು, ಉಡುಪಿಯಂತೆ ಶಿವಮೊಗ್ಗ ಜಿಲ್ಲೆಯನ್ನು ಬಲಪಂಥೀಯರ ಪ್ರಯೋಗ ಶಾಲೆಗಳಾಗಿ ಪರಿವರ್ತಿಸಲು ಅವಕಾಶ ನೀಡಲಿಲ್ಲ. ಇದು ಕೋಮುವಾದಿಗಳ ನಿದ್ದೆಗೆಡಿಸಿತ್ತು.
ಸಮಾಜವಾದದ ನೆಲದಲ್ಲಿ ಗಟ್ಟಿಯಾಗಿ ಬೇರೂರಲು ಹವಣಿಸುತ್ತಿದ್ದ ಕೋಮುವಾದಿ ಶಕ್ತಿಗಳು ಶಿವಮೊಗ್ಗದಲ್ಲಿ ನಡೆದಂತಹ ಕೆಲವು ಹತ್ಯೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತು.. ಉದಾಹರಣೆಗೆ ಶಿವಮೊಗ್ಗದ ಗೋಕುಲ್ ಎಂಬ ಯುವಕನನ್ನು ಮುಸ್ಲಿಂ ಯುವಕರು ಹತ್ಯೆ ಮಾಡಿದಾಗ, ಕೋಮುವಾದಿ ಮನಸ್ಥಿತಿಯ ನಾಯಕರು ಚಿಕ್ಕಮಗಳೂರಿನ ಮಹೇಂದ್ರಕುಮಾರ್ ಬಳಿ “ಭೂಮಿ ಫಲವತ್ತಾಗಿದೆ. ಹೂಟೆ ಮಾಡಿ ನೆಟ್ಟರೆ ಒಳ್ಳೆ ಫಸಲು ತೆಗೆಯಬಹುದು” ಎಂದು ಹೇಳಿದ್ದರು ಎಂದು ಸ್ವತಃ ಮಹೇಂದ್ರ ಕುಮಾರ್ ಸಂಘಪರಿವಾರ ತೊರೆದ ಬಳಿಕ ನೀಡಿದ್ದ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅದರಿಂದ ಮುಂದುವರೆದು ಹರ್ಷ ಹತ್ಯೆಯಾದ ನಂತರ ನಡೆದ ಘಟನೆಗಳನ್ನು ಒಮ್ಮೆ ಅವಲೋಕಿಸಿ 144 ಸೆಕ್ಷನ್ ಇದ್ದರೂ ಆಡಳಿತ ಪಕ್ಷದ ಸಚಿವರೊಬ್ಬರು ಸ್ವತಃ ತಾವೇ ಶವಯಾತ್ರೆಗೆ ಹೊರಟು ನಿಂತು ಫಲವತ್ತತೆಯ ಮಣ್ಣಿನಲ್ಲಿ ಫಸಲು ತೆಗೆಯಲು ಮುಂದಾದರು ಇನ್ನೂ ಮುಂದುವರೆದು ತೀರ್ಥಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ ಸಂಘಟನೆಯ ಮುಖಂಡನೊಬ್ಬ ತೀರ್ಥಹಳ್ಳಿಯ ಪ್ರಾಮಾಣಿಕ ಪತ್ರಕರ್ತರೊಬ್ಬರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕುತ್ತಾ, “ಈ ಮಣ್ಣಿನಲ್ಲಿ ಸಮಾಜವಾದ ನೆಲಕಚ್ಚಿ ಹೋಗಿದೆ, ಇನ್ನೇನಿದ್ದರೂ ಹಿಂದುತ್ವದ ಆಟ” ಎಂದು ಹೇಳಿದ್ದನ್ನು ಸ್ಮರಿಸಬಹುದು.
ಇಷ್ಟೆಲ್ಲಾ ಕಸರತ್ತು ನಡೆಸಿದರೂ ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದವನ್ನು ಮಟ್ಟಹಾಕಲು ಸಾಧ್ಯವಾಗಲಿಲ್ಲ. ಕಾರಣ ಸಮಾಜವಾದ ಸಿದ್ದಾಂತ ಈ ಮಣ್ಣಿನಲ್ಲಿ ಆಳವಾಗಿ ಬೇರೂರಿದೆ. ಅದನ್ನು ಕಿತ್ತುಹಾಕಲು ಯಾವುದೇ ಶಕ್ತಿಯಿಂದಲೂ ಸಾಧ್ಯವಿಲ್ಲ. ಹಣಬಲದಿಂದ ಚುನಾವಣೆಗಳನ್ನು ಗೆಲ್ಲಬಹುದೇ ಹೊರತು, ಈ ಮಣ್ಣಿನ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಸಮಾಜವಾದವನ್ನು ಕಿತ್ತುಹಾಕಲು ಸಾಧ್ಯವಿಲ್ಲ.
ಇಂದಿನ ಯುವಪೀಳಿಗೆ ರಾಮ್ ಮನೋಹರ್ ಲೋಹಿಯಾ, ಶಾಂತವೇರಿ ಗೋಪಾಲಗೌಡರಂತಹವರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ತಮ್ಮಲ್ಲೇ ಗುಂಪು ಚರ್ಚೆ ನಡೆಸಿ, ಯಾವುದು ಸರಿ, ಯಾವುದು ತಪ್ಪು ಎಂಬುವುದನ್ನು ಅವಲೋಕಿಸಿ ಸಮಾನತೆಯ ಸಮಾಜವನ್ನು ಕಟ್ಟಲು ಮುಂದಾಗಬೇಕಿದೆ. ಆ ಮೂಲಕ ಒಟ್ಟಾರೆಯಾಗಿ ವಿಶ್ವಮಾನವ ಕುವೆಂಪುರವರ ನೆಲ, ಶಾಂತವೇರಿ ಗೋಪಾಲಗೌಡರ ಸಮಾಜವಾದ ಸಿದ್ದಾಂತ, ಕಡಿದಾಳು ಮಂಜಪ್ಪ ಜನಿಸಿದ ಪುಣ್ಯಭೂಮಿ ಶಿವಮೊಗ್ಗ ಜಿಲ್ಲೆಯಲ್ಲಿ, ಚುನಾವಣೆಗಳಲ್ಲಿ ಹರಿಯುವ ಭ್ರಷ್ಟಾಚಾರದ ಹಣದ ಹೊಳೆಯಿಂದ ಸಮಾಜವಾದ ಸಿದ್ದಾಂತಕ್ಕೆ ಸ್ವಲ್ಪ ಹಿನ್ನಡೆಯಾಗಿದೆಯೇ ಹೊರತು, ಯಾವುದೇ ಮನುವಾದವಾಗಲಿ ಕೋಮುವಾದಿಗಳಾಗಲಿ ವಿಜೃಂಭಿಸಲು ಸಾಧ್ಯವಿಲ್ಲ.
ರಫಿ ರಿಪ್ಪನ್‌ಪೇಟೆ, ಪತ್ರಕರ್ತರು, ಶಿವಮೊಗ್ಗ
