ನಮ್ಮ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಅತ್ಯಗತ್ಯ. ಮಣ್ಣಿನ ಸವೆತವನ್ನು ಕಡಿಮೆ ಮಾಡಲು, ಫಲವತ್ತಾದ ಮಣ್ಣು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅಗತ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತಿದೆ ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಲಕ್ಷ್ಮೀ ಹೇಳಿದರು.
ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವನ ಸ್ವಾರ್ಥ ಚಟುವಟಿಕೆಯಿಂದಾಗಿ ಪರಿಸರ ಮಾಲಿನ್ಯ, ಕಾಡುಗಳ ನಾಶ, ಕೃಷಿ ಚಟುವಟಿಕೆಗಳಿಗೆ ರಾಸಾಯನಿಕ, ಕೀಟನಾಶಕಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇಂತಹ ನೂರಾರು ಕಾರಣದಿಂದಾಗಿ ಮಣ್ಣು ಕಲುಷಿತವಾಗುತ್ತಿದೆ. ಆದರೆ ಮಣ್ಣು ಒಂದು ನವೀಕರಿಸಬಹುದಾದ ನೈಸರ್ಗಿಕ ಸಂಪನ್ಮೂಲವಾಗಿದ್ದು, ಇದು ಮರ ಗಿಡಗಳು ಹಾಗೂ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಮಣ್ಣು ಪೋಷಕಾಂಶಗಳ ಸಮರ್ಪಕ ಪೂರೈಕೆ, ಆರೋಗ್ಯಕ್ಕೆ ಒತ್ತು ಕೊಟ್ಟು ಕೃಷಿಯಲ್ಲಿ ನಿರ್ವಹಣಾ ಕ್ರಮಗಳಾದ ಬೆಳೆ ಬದಲಾವಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನೀರಿನ ಸಂರಕ್ಷಣೆ ಹಾಗೂ ಹವಾಮಾನಕ್ಕೆ ತಕ್ಕಂತೆ ಬೆಳೆ ಬದಲಾವಣೆ ಮಾಡುವುದರಿಂದ ನಾವು ಮಣ್ಣಿನ ಆರೋಗ್ಯ ಕಾಪಾಡಬಹುದು ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಕರ್ತವ್ಯನಿರತ ವೈದ್ಯೆಯ ನಿಂದನೆ; ಎಫ್ಐಆರ್ ದಾಖಲು
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಮಣ್ಣಿನ ಆರೋಗ್ಯದ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಸಿರು ಸೇನೆ ಜಿಲ್ಲಾದ್ಯಕ್ಷ ಗೋವಿಂದ ರೆಡ್ಡಿ, ಈಶ್ವರ ರೆಡ್ಡಿ, ತಾಲ್ಲೂಕು ಅದ್ಯಕ್ಷ ಸದಾಶಿವ ರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.