ಮಕ್ಕಳಿಗೆ ಪೂರ್ತಿಯಾಗಿ ಬೇಸಿಗೆ ರಜೆ ನೀಡದೆ, ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಕಾರ್ಯಾರಂಭ ಮಾಡಿವೆ.
ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಆದೇಶವಿದ್ದರೂ, ಕೆಲವು ಶಾಲೆಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇಲಾಖೆಯ ಆದೇಶದಂತೆ ಮೇ 29ರಿಂದ ಶಾಲೆಗಳು ಪುನರಾರಂಭವಾಗಬೇಕು. ಆದರೆ, ಕೆಲವು ಖಾಸಗಿ ಶಾಲೆಗಳು ಈಗಾಗಲೇ ಆರಂಭಗೊಂಡಿದ್ದು, ತರಗತಿಗಳನ್ನೂ ಸಹ ಆರಂಭಿಸಿವೆ.
ಈ ಬಗ್ಗೆ ಕೆಲವು ಷೋಷಕರು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರತಿಷ್ಠಿತ ಶಾಲೆಗಳು, ಎಸ್ಜೆಆರ್ ಶಾಲೆ, ವೆಂಕಟ್ ಇಂಟರ್ ನ್ಯಾಷನಲ್ ಶಾಲೆ, ವಿದ್ಯಾವರ್ತಕ ಶಾಲೆ, ಕಾರ್ಮೆಲ್ ಸ್ಕೂಲ್ ಸೇರಿದಂತೆ ಹಲವು ಖಾಸಗಿ ಶಾಲೆಗಳು ಬೇಸಿಗೆ ರಜೆ ಕಳೆಯುವ ಮುನ್ನವೇ ಕಾರ್ಯಾರಂಭ ಮಾಡಿವೆ ಎಂಬ ಬಗ್ಗೆ ತಿಳಿದುಬಂದಿದೆ.
ಈ ಆರೋಪದ ಕುರಿತು ತಪಾಸಣೆಗಾಗಿ ಖಾಸಗಿ ಶಾಲೆಗಳ ಮೇಲೆ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ತರಗತಿ ಆರಂಭ ಮಾಡಿರುವ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಜತೆಗೆ, ಮಕ್ಕಳ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಬೇಕಾಬಿಟ್ಟಿಯಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಕೆಲ ದಿನಗಳ ಹಿಂದಷ್ಟೇ ವರದಿಯಾಗಿತ್ತು. ಶಾಲಾ ಮಕ್ಕಳ ಮರುಪ್ರವೇಶಾತಿ ನಡೆಯುತ್ತಿದ್ದು, ಖಾಸಗಿ ಶಾಲೆಗಳಲ್ಲಿ ಶುಲ್ಕ ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆ ಶಾಲಾ ಮಕ್ಕಳ ಪಾಲಕರು ಚಿಂತಿತರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಒಂದೇ ಕುಟುಂಬದ ನಾಲ್ವರು ಸಾವು; ಅನಿಲ ಸೋರಿಕೆ ಶಂಕೆ
ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಎಸ್‌ಎಸ್‌ಎಲ್‌ಸಿ ಬೋರ್ಡ್‌ಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳಲ್ಲಿ, ಒಂದೇ ಕಂತಿನಲ್ಲಿ ಶುಲ್ಕ ಪಾವತಿಸುವಂತೆ ಪಾಲಕರ ಮೇಲೆ ಆಡಳಿತ ಮಂಡಳಿಗಳು ಒತ್ತಡ ಹೇರುತ್ತಿರುವುದು ವರದಿಯಾಗಿದೆ.
ಕಳೆದ ಶೈಕ್ಷಣಿಕ ವರ್ಷದವರೆಗೆ, ಮೂರು ಕಂತುಗಳಲ್ಲಿ ಶುಲ್ಕವನ್ನು ಪಾವತಿಸುವ ಅವಕಾಶ ಇತ್ತು. ಕೆಲವು ವಿಶೇಷ ಸಂದರ್ಭ ಎಂದು ಪರಿಗಣಿಸಿ ಹೆಚ್ಚುವರಿ ಕಂತುಗಳನ್ನೂ ಪಾಲಕರಿಗೆ ಆಡಳಿತ ಮಂಡಳಿಗಳು ಕೊಡುತ್ತಿದ್ದವು. ಆದರೆ ಈ ಬಾರಿ ಬಹುತೇಕ ಎಲ್ಲ ಖಾಸಗಿ ಶಾಲೆಗಳಲ್ಲಿ ಕನಿಷ್ಠ ಶೇಕಡ 30 ರಿಂದ 40 ರಷ್ಟು ಶುಲ್ಕವನ್ನು ಹೆಚ್ಚಿಸಲಾಗಿದೆ. ಇದರಿಂದ ಕಳವಳಗೊಂಡಿರುವ ಅನೇಕ ಪಾಲಕರು ತಮ್ಮ ಶಾಲಾ ವ್ಯಾಪ್ತಿಯ ಬ್ಲಾಕ್ ಶಿಕ್ಷಣ ಅಧಿಕಾರಿಗಳನ್ನು (ಬಿಇಒ) ಸಂಪರ್ಕಿಸಿ, ಪರಿಹಾರ ಒದಿಸುವಂತೆ ಕೋರಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಅನೇಕ ಖಾಸಗಿ ಶಾಲೆಗಳು ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡುತ್ತಿರುವುದು ಪೋಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.