ಹಣ ಹಾಗೂ ಕೌಂಟುಂಬಿಕ ಕಲಹದ ಹಿನ್ನೆಲೆ ತನ್ನ ತಾಯಿಯನ್ನೇ ಮಗ ಕೊಲೆಗೈದಿರುವ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.
ಮೃತ ಮಹಿಳೆಯನ್ನು ಪದ್ಮಾಬಾಯಿ ಎಂದು ಗುರುತಿಸಲಾಗಿದ್ದು, ಪದ್ಮಾಬಾಯಿ ಮಗ ಈಶ ನಾಯಕ್ (26) ತಾಯಿಯನ್ನು ಕೊಲೆಗೈದ ಆರೋಪಿ.
ಜೂನ್ 19ರ ಗುರುವಾರ ಪದ್ಮಾಬಾಯಿಯವರು ಮಲಗಿದ್ದಲ್ಲಿಂದ ಏಳುತ್ತಿಲ್ಲವೆಂದು ಅವರ ಮಗ ಪೋನ್ ಕರೆ ಮಾಡಿ ಪದ್ಮಾಬಾಯಿ ತಂಗಿ ಶಿಲ್ಪ ಎನ್ನುವವರಿಗೆ ತಿಳಿಸಿದ್ದಾರೆ. ಬಳಿಕ ಪದ್ಮಾಬಾಯಿ ಅವರನ್ನು ಚಿಕಿತ್ಸೆ ಹಿನ್ನೆಲೆ ಉಡುಪಿಯ ಜಿಲ್ಲಾ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಪದ್ಮಾಬಾಯಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಪದ್ಮಾಬಾಯಿಯವರ ಕುತ್ತಿಗೆಯ ಬಳಿ ಕೆಂಪಾಗಿದ್ದ ಹಿನ್ನೆಲೆ ಯಾರೋ ಕುತ್ತಿಗೆಯನ್ನು ಒತ್ತಿ ಕೊಂದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಶಿಲ್ಪ ಅವರು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮೃತ ಶರೀರವನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಾಗಾರದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರಿಂದ ವೈದ್ಯಕೀಯ ಶವಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜೂನ್ 21ರಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬಂದಿದ್ದು ಅದರಲ್ಲಿ ಪದ್ಮಾಬಾಯಿಯವರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ಪದ್ಮಾ ಬಾಯಿರವರನ್ನು ಅವರ ಮಗನಾದ ಈಶ ನಾಯ್ಕ ಎನ್ನುವವನು ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಪ್ರಕರಣದ ಆರೋಪಿಯಾದ ಈಶ ನಾಯಕ್ ನನ್ನು ದಸ್ತಗಿರಿ ಮಾಡಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆಂದು ಪೊಲೀಸರು ತಿಳಿಸಿದ್ದಾರೆ.