ಆಯುಧಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಬಳಕೆ ಮಾಡಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಸೊರಬದಲ್ಲಿ ಫೆ.01ರಿಂದ 10 ರವರೆಗೆ ಆಯೋಜಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಸೊರಬ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ತರಬೇತಿ ಮುಗಿದ ನಂತರ ತರಬೇತಿ ಪಡೆದವರ ಜವಾಬ್ದಾರಿಗಳು ಹೆಚ್ಚಾಗಿದ್ದು, ಪೊಲೀಸ್ ಇಲಾಖೆಯ ರೀತಿಯೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ. ತರಬೇತಿಯಲ್ಲಿ ಹೇಳಿಕೊಟ್ಟ ಶಿಸ್ತನ್ನು ಜೀವನದ ಪ್ರತಿ ಹಂತದಲ್ಲೂ ಪಾಲನೆ ಮಾಡಬೇಕು. ಆಯುಧ ಪರವಾನಿಗೆಯನ್ನು ಪಡೆದು ಆಯುಧಗಳನ್ನು ಖರೀದಿ ಮಾಡಿದರಷ್ಟೇ ಸಾಲದು. ಬದಲಿಗೆ ಆಯುಧಗಳನ್ನು ಬಳಕೆ ಮಾಡುವ ಸ್ಥಳ, ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಸುರಕ್ಷಿತವಾಗಿ ಒಳ್ಳೆಯ ಕಾರ್ಯಗಳಿಗೆ ಮಾತ್ರ ಬಳಸಬೇಕು” ಎಂದು ಹೇಳಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, “ಜನಸಾಮಾನ್ಯರಿಗೆ ಅವರ ಮೇಲೆ ಆಗುವ ಯಾವುದೇ ಅಹಿತಕರ ಘಟನೆಗಳನ್ನು ಎದುರಿಬೇಕು ಎಂದರೆ ಅವರಲ್ಲಿ ಆತ್ಮ ಸ್ಥೈರ್ಯ ಎಂಬುದು ಮುಖ್ಯವಾಗಿರುತ್ತದೆ. ತರಬೇತಿ ಮುಕ್ತಾಯವಾದ ನಂತರ ಆಯುಧಗಳನ್ನು ಬಳಕೆ ಮಾಡಬೇಕಾದ ಸಂದರ್ಭ ಬಂದೊದಗಿದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಆಯುಧಗಳನ್ನು ಬಳಸದೆ, ಸಮಾಜದ ಜವಾಬ್ದಾರಿಯುತ ಪ್ರಜ್ಞಾವಂತ ಪ್ರಜೆಯಾಗಿ ಶಿಸ್ತುಬದ್ಧ ಜೀವನ ನಡೆಸಬೇಕು” ಎಂದು ತಿಳಿ ಹೇಳಿದರು.

ಶಿವಮೊಗ್ಗ ಪೊಲೀಸ್ ಅಧೀಕ್ಷಕ ಮಿಥುನ್ ಕುಮಾರ್ ಜಿ. ಕೆ. ಮಾತನಾಡಿ, “ಅಧಿಕಾರದ ಜೊತೆಗೆ ಹೊಣೆಗಾರಿಕೆಯೂ ಬರುತ್ತದೆ. ಅದೇ ರೀತಿ ಅಧಿಕಾರ ಹೆಚ್ಚಾದಂತೆ ಹೊಣೆಗಾರಿಕೆಯೂ ಸಹಾ ಹೆಚ್ಚುತ್ತದೆ. ಆಯುಧಗಳನ್ನು ಕುಟುಂಬ, ಆಸ್ತಿಯ ರಕ್ಷಣೆಗಾಗಿ ಮಾತ್ರ ಬಳಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಕೂಡದು. ಒಂದು ವೇಳೆ ಬಳಸಿದಲ್ಲಿ ಪರವಾನಿಗೆ ಇರುವ ಆಯುಧ ಇದ್ದರೂ ಸಹ ಅದು ಕಾನೂನು ರೀತ್ಯಾ ಅಪರಾಧವಾಗಿರುತ್ತದೆ. ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಸಿದರು.
ನಾಗರೀಕ ಬಂದೂಕು ತರಬೇತಿ ಶಿಬಿರದಲ್ಲಿ *ತರಬೇತಿ ಪೂರ್ಣಗೊಳಿಸಿದ ಒಟ್ಟು 200 ಜನ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸೊರಬದ ತಾವರೆಕೊಪ್ಪದಲ್ಲಿ ಸಂಭ್ರಮದಿಂದ ಜರುಗಿದ ಹೋರಿಹಬ್ಬ
ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕ ಕೃಷ್ಣ ಮೂರ್ತಿ, ಶಿಕಾರಿಪುರ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಕೇಶವ್, ರಾಜಶೇಖರ್ ಸಿಪಿಐ ಸೊರಬ ವೃತ್ತ ಮತ್ತು ನಾಗರಿಕ ಬಂದೂಕು ತರಬೇತಿ ಶಿಬಿರದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

