ದ್ವೇಷ ಭಾಷಣ, ಮತೀಯ ದ್ವೇಷ, ಅಸ್ಪೃಶ್ಯತೆ, ಜಾತೀಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯು ಸೌಹಾರ್ದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆ ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ ಎಂದು ಸೌಹಾರ್ದ ಮಾನವ ಸರಪಳಿ ಅಭಿಯಾನದ ಸಂಘಟಕ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.
ಗಾಂಧಿ ಹುತಾತ್ಮರಾದ ಜನವರಿ 30ರಂದು ಸಂಜೆ 4.40ಕ್ಕೆ ಉಡುಪಿಯ ಕ್ಲಾಕ್ ಟವರ್ ಬಳಿ ಸೌಹಾರ್ದ ಕರ್ನಾಟಕ ಸಂಘಟನೆಯು ಸೌಹಾರ್ದ ಮಾನವ ಸರಪಳಿ ಅಭಿಯಾನವನ್ನು ಆಯೋಜಿಸಿದೆ. ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಪ್ರಸ್ತುತ ಸಮಾಜದಲ್ಲಿ ಸ್ನೇಹಪರತೆ, ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಳಜಿಯುಳ್ಳವರೆಲ್ಲಾ ಒಂದೆಡೆ ಕಲೆತು, ಕುಳಿತು ಕಾರ್ಯಯೋಜನೆ ರೂಪಿಸಿ, ಸೌಹಾರ್ದತೆಯ ಸಂದೇಶವನ್ನು ಜನರ ನಡುವೆ ನಿರಂತರ ಕೊಂಡೊಯ್ಯುವ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ” ಎಂದರು.
ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯ ಹೊಣೆಗಾರರಾದ ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಪ್ರೊ.ಫಣಿರಾಜ್, ಡಾ.ಜೆರಾಲ್ಡ್ ಪಿಂಟೋ,ರೊನಾಲ್ಡ್, ಸಂಜೀವ್ ಬಳ್ಕೂರು, ಶಶಿಧರ್, ಕವಿರಾಜ್, ಮೋಹನ್ ಮತ್ತು ಸಂತೋಷ್ ಕರ್ವೆಲೋ, ಇದ್ರಿಸ್ ಹೂಡೆ, ಅಬ್ದುಲ್ ಅಝೀಝ್ ಉದ್ಯಾವರ ಇದ್ದರು.