ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ತನಿಖೆಗೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಬುಧವಾರ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ತಿಮರೋಡಿ ಮತ್ತು ಸೌಜನ್ಯ ಕುಟುಂಬ, “ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಮಾಯನನ್ನು ಬಂಧಿಸಿ, ಪ್ರಕರಣದ ದಿಕ್ಕು ತಪ್ಪಿಸಲಾಗಿತ್ತು. ಇದೀಗ, ಆತ ನಿರ್ದೋಷಿಯೆಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಹಾಗಿದ್ದ ಮೇಲೆ, ನೈಜ ಅಪರಾಧಿಗಳನ್ನು ಬಂಧಿಸಬೇಕು. ಶಿಕ್ಷೆ ವಿಧಿಸಬೇಕು. ಅದಕ್ಕಾಗಿ, ಪ್ರಕರಣವನ್ನು ಮರು ತನಿಖೆಗೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
2012ರ ಅಕ್ಟೋಬರ್ 9ರಂದು ಉಜಿರೆಯಲ್ಲಿ ಕಾಲೇಜು ಮುಗಿಸಿ, ಧರ್ಮಸ್ಥಳದಲ್ಲಿದ್ದ ತಮ್ಮ ಮನೆಗೆ ಸೌಜನ್ಯ ತೆರಳುತ್ತಿದ್ದಾಗ ಆಕೆಯನ್ನು ಅಪಹರಿಸಲಾಗಿತ್ತು. ಅಕ್ಟೋಬರ್ 10ರಂದು ಆಕೆ ನಾಪತ್ತೆಯಾಗಿದ್ದ ಸ್ಥಳದಿಂದ ಕೇವಲ 20 ಮೀಟರ್ ದೂರದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿದವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಹಲವಾರು ಪ್ರತಿಭಟನೆಗಳು ನಡೆದಿದ್ದವು.
ಈ ಸುದ್ದಿ ಓದಿದ್ದೀರಾ?: ತುಮಕೂರು | ಹೃದಯ ವಿದ್ರಾವಕ ಘಟನೆ; ಸೂತಕದ ಮೌಢ್ಯಕ್ಕೆ ಹಸುಗೂಸು ಬಲಿ
ಪ್ರತಿಭಟನೆಯ ಕಾವು ಹೆಚ್ಚಾದಂತೆ, ಆರೋಪಿಗಳನ್ನು ಬಂಧಿಸಬೇಕಾದ ಸಂಕಷ್ಟಕ್ಕೆ ಪೊಲೀಸರು ಸಿಲುಕಿದ್ದರು. ಆಗ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಅಮಾಯಕ ಸಂತೋಷ್ ರಾವ್‌ನನ್ನು ಮೂವರು ಜೈನ್‌ಗಳು ಹಿಡಿದು, ಆತನ ಆರೋಪಿಯೆಂದು ಬೊಬ್ಬೆ ಹೊಡೆದು ಪೊಲೀಸರಿಗೆ ಒಪ್ಪಿಸಿದ್ದರು. ತಾನೇ ಕೃತ್ಯ ಎಸಗಿದ್ದು ಎಂದು ಒಪ್ಪಿಕೊಳ್ಳುವಂತೆ ಸಂತೋಷ್‌ಗೆ ಪೊಲೀಸರು ಹಿಂಸೆ ನೀಡಿದ್ದರು.
ಇದೀಗ, ಸಂತೋಷ್ ರಾವ್ ನಿರಪರಾಧಿಯೆಂದು ಸಿಬಿಐ ಕೋರ್ಟ್ ಘೋಷಿಸಿದೆ. ಈ ಬೆನ್ನಲ್ಲೇ ಸೌಜನ್ಯ ಪರ ಹೋರಾಟ ಮತ್ತೆ ಭುಗಿಲೆದ್ದಿದೆ. ರಾಜ್ಯದ್ಯಂತ ಹೋರಾಟಗಳು ನಡೆಯುತ್ತಿವೆ. ನೈಜ ಅರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.