ಧರ್ಮಸ್ಥಳದ ಸೌಜ್ಯನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಪೊಲೀಸರು ಬಂಧಿಸಿದ್ದ ಸಂತೋಷ್ ರಾವ್ ಅವರನ್ನು ನಿರ್ದೋಷಿಯೆಂದು ಘೋಷಿಸಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಮರುಪರಿಶಿಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಿದೆ.
2012ರ ಅಕ್ಟೋಬರ್ 10ರಂದು ಉಜಿರೆಯಲ್ಲಿ ಕಾಲೇಜು ಮುಗಿಸಿಕೊಂಡು ಧರ್ಮಸ್ಥಳದಲ್ಲಿ ತನ್ನ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಸಂತೋಷ್ ರಾವ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು. 11 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಸಂತೋಷ್ ರಾವ್ ನಿರಪರಾಧಿ ಎಂದು ಘೋಷಿಸಿ, ಬಿಡುಗಡೆ ಮಾಡಿತ್ತು.
ಆ ಬಳಿಕ, ನಿಜವಾದ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆ ವಿಧಿಸಬೇಕು. ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ, ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದೆ.
ಅವಧಿ ಮುಗಿದ ಮೇಲೆ ಮೇಲ್ಮನವಿ ಸಲ್ಲಿಸಿರುವ ಸಿಬಿಐ
2023ರ ಜುಲೈ 16ರಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯವು, ತನ್ನ ತೀರ್ಪಿನ ವಿರುದ್ಧ 60 ದಿನಗಳ ಒಳಗಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿತ್ತು. ಆದರೆ, ತೀರ್ಪು ಬಂದು ಈಗಾಗಲೇ 120 ದಿನಗಳು ಕಳೆದು ಹೋಗಿವೆ. ಈಗ ಸಿಬಿಐ ಮೇಲ್ಮನವಿ ಸಲ್ಲಿಸಿದೆ. ಸಂತೋಷ್ ರಾವ್ ಅವರೇ ನಿಜವಾದ ಆರೋಪಿ ಎಂದು ಮೇಲ್ಮನವಿಯಲ್ಲಿ ಸಿಬಿಐ ವಾದಿಸಿದೆ.
ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಸೌಜನ್ಯ ಪರ ಹೋರಾಟಗಳು ಭುಗಿಲೆದ್ದಿವೆ. ಸಂತೋಷ್ ರಾವ್ ನಿರಪರಾಧಿ ಎಂಬುದು ಮೊದಲೇ ಖಾತ್ರಿಯಾಗಿತ್ತು. ಆದರೆ, ನಿಜವಾದ ಅಪರಾಧಿಗಳು ಧರ್ಮಸ್ಥಳದಲ್ಲಿಯೇ ಇದ್ದಾರೆ, ಅವರನ್ನು ಬಂಧಿಸಬೇಕು ಎಂದು ಒತ್ತಾಯಗಳು ಕೇಳಿಬಂದಿವೆ. ಸೌಜನ್ಯ ಕುಟುಂಬಸ್ಥರೂ ಕೂಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಸೋದರ ಸಂಬಂಧ ಸೇರಿದಂತೆ ನಾಲ್ವರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ನಾಲ್ವರನ್ನೂ ಬಂಧಿಸಿ, ವಿಚಾರಣೆ ಒಳಪಡಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಇದುವರೆಗೂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದು ಸೌಜನ್ಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ನಡುವೆ, ಪ್ರಕರಣವನ್ನು ಮರು ತನಿಖೆ ನಡೆಸಲು ಸೂಚನೆ ನೀಡಬೇಕೆಂದು ಬೆಂಗಳೂರಿನ ಶೇಷಾದ್ರಿಪುರದ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ಜಿ ನವೀನ್ ಕುಮಾರ್ ಮತ್ತು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.