ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ ಹೆಚ್ಚು ಸೋಯಾಬೀನ್ ಬೆಳೆ ಬೆಳೆಯಲಾಗತ್ತದೆ. ಆದರೆ ಈ ವರ್ಷ ಬೆಳೆದ ಬೆಳೆ ಕೀಟ ಬಾಧೆ, ಕಳಪೆ ಬೀಜ ಬಿತ್ತನೆ ಮುಖ್ಯವಾಗಿ ಅತಿಯಾದ ಮಳೆ ಕಾರಣಗಳಿಂದ ಸಂಪೂರ್ಣ ನೆಲಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಕಾಲಕ್ಕೆ ಸರ್ಕಾರ ಪರಿಹಾರ ನೀಡುವುದೆಂಬ ನಿರೀಕ್ಷೆಯಲ್ಲಿದ್ದಾರೆ.
ಪ್ರತಿ ವರ್ಷ ಇದೇ ಕಥೆ. ಕಳಪೆ ಬೀಜ ವಿತರಣೆ, ಪರಿಣಾಮಕಾರಿಯಲ್ಲದ ಕೀಟನಾಶಕ, ಆಡಳಿತಾತ್ಮಕ ನಿರ್ಲಕ್ಷ್ಯ. ಪ್ರಕೃತಿಯ ವಿಕೋಪದ ಜತೆಗೆ ಮಾನವ ಸೃಷ್ಟಿಸಿದ ದೋಷವೇ ಇಂದು ರೈತರ ಬದುಕನ್ನು ನಾಶ ಮಾಡುತ್ತಿದೆ. ಹೊಲದಲ್ಲಿ ರೈತನಿಗೆ ಬೆಳೆ ಸಿಗದಿದ್ದರೆ ಅದು ಕೇವಲ ಆತನ ಸಮಸ್ಯೆಯಲ್ಲ—ಇಡೀ ಸಮಾಜದ ಆಹಾರ ಭದ್ರತೆಯ ಪ್ರಶ್ನೆಯಾಗುತ್ತದೆ.

ಬೆಳಗಾವಿ ಸುತ್ತಮುತ್ತಲ ತಾಲೂಕಿನಲ್ಲಿ ರೈತರು ಬೆಳೆದ ಸೋಯಾಬೀನ್ ಬೆಳೆಗೆ ಎಲೆಕೋ ವಾರ್ಪಾ ಆರ್ಮಿಜಿರಿ ಎಂಬ ಕೀಟದ ದಾಳಿಯು ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಈ ಕಾರಣದಿಂದ ರೈತರು ತಾವು ಕಷ್ಟಪಟ್ಟು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬೆಳೆದ ಬೆಳೆಯನ್ನು ಟ್ರ್ಯಾಕ್ಟರ್ ನಿಂದ ತಾವೇ ಮುಂದೆ ನಿಂತು ನಾಶಪಡಿಸುತ್ತಿದ್ದಾರೆ. ಪ್ರತಿ ಎಕರೆಗೆ 50 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಬೆಳೆ ಸರಿಯಾಗಿ ಬಾರದೆ ನಾಶಪಡಿಸುವ ದುಸ್ಥಿತಿ ಎದುರಾಗಿದೆ.
ಈ ಕುರಿತು ಸೋಯಾಬೀನ್ ಬೆಳೆಗಾರರಾದ ರೈತ ಅಶೋಕ ಮಾತನಾಡಿ, “ನಾವು ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೋಯಾಬೀನ್ ಬೆಳೆದಿದ್ದೆವು. ವಿಪರೀತ ಮಳೆ, ಕೀಟ ಬಾಧೆಯಿಂದ ಬೇಳೆ ನಾಶವಾಗಿದೆ. ಬೆಳೆದ ಬೆಳೆಯನ್ನು ಕೀಟಗಳ ಕಾರಣದಿಂದ ನಾಶಪಡಿಸಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ ಸರ್ಕಾರವು ಬೆಳೆ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು” ಎಂದು ಮನವಿ ಮಾಡಿದ್ದಾರೆ.
ರೈತ ಸಂಘಟನೆಯ ಮುಖಂಡ ಬೀರಪ್ಪ ಮಾತನಾಡಿ, “ಬೈಲಹೊಂಗಲ ಮತ್ತು ಕಿತ್ತೂರು ತಾಲೂಕಿನಲ್ಲಿ 45 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಸೋಯಾಬೀನ್ ಬಿತ್ತನೆ ಮಾಡಲಾಗಿದೆ. ಆದರೆ, ರೈತರಿಗೆ ನೀಡಿದ್ದ ಕಳಪೆ ಬಿತ್ತನೆ ಬೀಜ ಇಂದು ಬೆಳೆ ನಾಶಕ್ಕೆ ಕಾರಣವಾಗಿದೆ. ಅಲ್ಲದೆ ಕೀಟ ಬಾಧೆಯಿಂದ ನಾಶವಾಗಿದೆ. ಈ ವಿಚಾರವಾಗಿ ಬೈಲಹೊಂಗಲ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿಯವರು ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದು ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಸರ್ಕಾರವು ಆದಷ್ಟು ಬೇಗ ರೈತರಿಗೆ ಪರಿಹಾರ ನೀಡಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಅತಿವೃಷ್ಟಿಯ ಕಾರಣ ಸೋಯಾಬೀನ್ ಕೀಟ ದಾಳಿಗೆ ತುತ್ತಾಗಿದೆ ಹೊರತು ಕಳಪೆ ಬೀಜ ಕಾರಣವಲ್ಲ. ಮಳೆ ಇನ್ನಷ್ಟು ದಿನ ಮುಂದುವರೆದರೆ ತುಕ್ಕು ರೋಗ ಕಾಣಿಸಿಕೊಳ್ಳಬಹುದು. ರೈತರ ನೆರವಿಗೆ ಇಲಾಖೆಯಿಂದ 17 ತಂಡಗಳನ್ನು ರಚಿಸಿ 42 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇವೆ. ಅಧಿಕಾರಿಗಳ ಜತೆಗೆ ಕೀಟ ತಜ್ಞರು ಕೃಷಿ ವಿಜ್ಞಾನಿಗಳೂ ಇದ್ದಾರೆ. ಹಾನಿ ಅನುಭವಿಸಿದ ರೈತರಿಗೆ ಬೆಳೆ ವಿಮೆ ಮಾಡಿಸಲಾಗುವುದು. ವಿಮೆಗೆ ಆಗಸ್ಟ್ 30 ಕೊನೆಯ ದಿನವಾಗಿದ್ದು ಸೆಪ್ಟೆಂಬರ್‌ವರೆಗೂ ದಿನಾಂಕ ವಿಸ್ತರಣೆ ಮಾಡಲಾಗುವುದು. ವಿಜ್ಞಾನಿಗಳ ವರದಿ ಬಂದ ಮೇಲೆ ಹಾನಿಗೆ ಕಾರಣ ಗೊತ್ತಾಗಲಿದೆ” ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೇಕರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸೋಯಾಬೀನ್ ಬೆಳೆದ ರೈತರ ಸಮಸ್ಯೆ ಕೇವಲ ಬೆಳಗಾವಿಯ ಜಿಲ್ಲೆಯ ಸಮಸ್ಯೆಯಲ್ಲ, ಇದು ಗ್ರಾಮೀಣ ಭಾರತದ ಸತ್ಯ. ಸರ್ಕಾರ ತಕ್ಷಣ ಪರಿಹಾರ ಘೋಷಿಸಿ, ಇಲ್ಲದಿದ್ದರೆ ರೈತರ ತೋಟಗಳು ಶೂನ್ಯವಾಗುವುದಷ್ಟೇ ಅಲ್ಲ, ರೈತರ ಭವಿಷ್ಯವೂ ಬತ್ತಿಹೋಗುತ್ತದೆ. ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿದ ರೈತನ ಕೈಗೆ ಇಂದು ಒಂದು ದವಸವೂ ಬಂದಿಲ್ಲ. ಹೊಲದಲ್ಲಿ ಬೆಳೆ ನಾಶ, ಮನೆಯಲ್ಲಿ ಸಾಲದ ಒತ್ತಡ – ಈ ಸಂಕಷ್ಟಕ್ಕೆ ಕಾರಣ ಯಾರು? ಸಂಬಂಧಪಟ್ಟ ಇಲಾಖೆ ಕೂಡಲೇ ಗಮನ ಹರಿಸಬೇಕು. ಸಂಕಷ್ಟಕ್ಕೀಡಾದ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತರ ಆಗ್ರಹ.
ಇದನ್ನೂ ಓದಿ: ನುಡಿಯಂಗಳ | ಅಂತರಂಗ ಬಿಚ್ಚಿಡುವ ‘ಆಂಗಿಕ ಭಾಷೆ’
ಕಳಪೆ ಬೀಜ ವಿತರಿಸಿದವರು ಯಾರು? ಪರಿಣಾಮಕಾರಿಯೇ ಅಲ್ಲದ ಕೀಟನಾಶಕವನ್ನು ರೈತನ ಕೈಗೆ ಕೊಟ್ಟವರು ಯಾರು? ಈ ಎಲ್ಲದರ ಮೇಲ್ವಿಚಾರಣೆ ಮಾಡಬೇಕಿದ್ದ ಅಧಿಕಾರಿಗಳು ಎಲ್ಲಿ ಮಲಗಿದ್ದರು? ಈ ಕುರಿತು ಸರ್ಕಾರ ನಿರ್ಲಕ್ಷ್ಯ ಮಾಡಿದ ಕಾರಣ ರೈತ ಇಂದು ಸೋಯಾಬೀನ್ ಬೆಳೆಯನ್ನು ಟ್ರ್ಯಾಕ್ಟರ್‌ನಿಂದ ನಾಶ ಮಾಡುತ್ತಿದ್ದಾನೆ. ಸರ್ಕಾರವು ಬೇಗನೆ ಈ ಕುರಿತು ಕ್ರಮ ಕೈಗೊಂಡು ಬೆಳೆ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು