ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲ ಕಾರ್ಮಿಕರ ರಕ್ಷಣೆ, ಪುನರ್ವಸತಿ, ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ನಿಷೇಧ, ನಿಯಂತ್ರಣ ಕಾಯ್ದೆ ಕುರಿತ ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಬಾಲ ಕಾರ್ಮಿಕರ ತಪಾಸಣಾ ಕಾರ್ಯಾಚರಣೆ ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
“ಬಾಲ ಕಾರ್ಮಿಕ ಪದ್ದತಿಯಿಂದ ಮಕ್ಕಳನ್ನು ರಕ್ಷಿಸಲು ಜಿಲ್ಲಾದ್ಯಂತ ವ್ಯಾಪಕವಾಗಿ ಕಾರ್ಯಾಚರಣೆ ಹಾಗೂ ತಪಾಸಣಾ ಕಾರ್ಯವನ್ನು ಮತ್ತಷ್ಟು ಹೆಚ್ಚಳ ಮಾಡುಬೇಕು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರ ತಪಾಸಣೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚುರುಕುಗೊಳಿಸಬೇಕು. ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟ ಅಂಗಡಿ, ಉದ್ದಿಮೆ ಸಂಸ್ಥೆಗಳ ಮಾಲೀಕರ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಹಿಸುವ ಜೊತೆಗೆ ಅಂಗಡಿ ಉದ್ಯಮ ಪರವಾನಗಿ ರದ್ದು ಮಾಡುವ ಕಠಿಣ ಕ್ರಮಗಳಿಗೂ ಅಧಿಕಾರಿಗಳು ಮುಂದಾಗಬೇಕು ” ಎಂದು ತಿಳಿಸಿದರು.
2024 ನೇ ಏಪ್ರಿಲ್ ನಿಂದ 2025 ರ ಮಾರ್ಚ್ ವರೆಗೆ ತಪಾಸಣೆ ಕೈಗೊಂಡ ವೇಳೆ 25 ಬಾಲ ಕಾರ್ಮಿಕರನ್ನು ಗುರುತಿಸಲಾಗಿದೆ. ಆದರೆ, 7 ಪ್ರಕರಣಗಳಲ್ಲಿ ಮಾತ್ರ ಎಫ್ಐಆರ್ ದಾಖಲಾಗಿದೆ. ಉಳಿದ ಪ್ರಕರಣಗಳಲ್ಲಿಯೂ ಎಫ್ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರವೇ ಕ್ರಮವಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.
” ಬಾಲ ಕಾರ್ಮಿಕ ಪದ್ದತಿಯಿಂದ ರಕ್ಷಿಸಿದ ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸುವುದಷ್ಟೇ ಕಾರ್ಮಿಕ ಇಲಾಖೆಯ ಕೆಲಸವಲ್ಲ. ರಕ್ಷಿಸಲ್ಪಟ್ಟ ಮಕ್ಕಳ ಮುಂದಿನ ಭವಿಷ್ಯ ಉತ್ತಮವಾಗಿ ರೂಪಿಸುವ ಜವಾಬ್ದಾರಿ ಕಾರ್ಮಿಕ ಇಲಾಖೆಯೊಂದಿಗೆ ಇತರೆ ಇಲಾಖೆಗಳಿಗೂ ಇದೆ. ಶಿಕ್ಷಣ, ಕೌಶಲ್ಯ ತರಬೇತಿಯಂತಹ ಕಾರ್ಯಕ್ರಮಗಳನ್ನು ಮಕ್ಕಳಿಗೆ ಮುಂದುವರೆಸಬೇಕು. ವಸತಿ ಶಾಲೆ, ಹಾಸ್ಟೆಲ್ ಗಳಂತಹ ಸೌಲಭ್ಯವನ್ನು ಕಲ್ಪಿಸಬೇಕು. ವೃತ್ತಿ ಶಿಕ್ಷಣ, ನರ್ಸಿಂಗ್ ಸೇರಿದಂತೆ ಮಕ್ಕಳಿಗೆ ಇರುವ ಆಸಕ್ತಿ ವಿಷಯದಲ್ಲಿ ಶಿಕ್ಷಣ ಕೊಡಿಸಿ ಅವರ ಭವಿಷ್ಯಕ್ಕೆ ನೆರವಾಗಬೇಕು ” ಎಂದರು.
ಮಕ್ಕಳನ್ನು ಏಕೆ ದುಡಿಮೆಗೆ ದೂಡಲಾಗಿದೆ ಎಂಬ ಬಗ್ಗೆ ಕುಟುಂಬದಿಂದ ಕೌನ್ಸಲಿಂಗ್ ಮೂಲಕ ತಿಳಿದುಕೊಳ್ಳಬೇಕು. ಉದ್ಯೋಗ, ಆರ್ಥಿಕ ಸೌಲಭ್ಯಗಳು ಅಗತ್ಯವಿದ್ದಲ್ಲಿ ಕಲ್ಪಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ನೆರವಾಗುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆ ಮಾದರಿಯಾಗಬೇಕು. ಈ ಬಗ್ಗೆ ಪೂರ್ವ ಯೋಜನೆ ಹಾಗೂ ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ ಮಾತನಾಡಿ ‘ ಮಕ್ಕಳನ್ನು ಬಾಲ ಕಾರ್ಮಿಕ ಪದ್ದತಿಯಿಂದ ರಕ್ಷಿಸಿದ ಬಳಿಕ ಮುಂದೆ ವಹಿಸಬೇಕಿರುವ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ‘ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸರ್ಕಾರಿ ಶಾಲೆಗಳನ್ನು ಉಳಿಸಿ : ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಬಚಪನ್ ಬಚಾವೋ ಆಂದೋಲದ ರಾಜ್ಯ ಸಂಯೋಜಕ ಬಿನು ವರ್ಗಿಸ್, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಂ. ಮಹೇಶ್, ತಾಲೂಕು ಕಾರ್ಮಿಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.