ಗಣಿಗಾರಿಕೆಯಿಂದ ತೊಂದರೆಗೆ ಸಿಲುಕಿದ ಜನರ ಜೀವನ ಮಟ್ಟದ ಸುಧಾರಣೆಗಾಗಿ ಮೀಸಲಿರುವ 25,000 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡುವ ಯತ್ನ ನಡೆಯುತ್ತಿದೆ ಎಂದು ಸಮಾಜ ಪರಿವರ್ತನ ಸಮುದಾಯ (ಎಸ್‌ಪಿಎಸ್) ಮುಖ್ಯಸ್ಥ ಎಸ್.ಆರ್ ಹಿರೇಮಠ ಆರೋಪಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಗಣಿಗಾರಿಕೆಯಿಂದ ಜೀವನ ಕಳೆದುಕೊಂಡ ಜನರಿಗಾಗಿ ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳಿಂದ ಕರ್ನಾಟಕ ಗಣಿಗಾರಿಕೆ ಪರಿಸರ ಮರುಸ್ಥಾಪನೆ ನಿಗಮ (ಕೆಎಂಇಆರ್‌ಸಿ) ಸಂಗ್ರಹಿಸಿರುವ 25 ಸಾವಿರ ಕೋಟಿ ರೂ.ಅನ್ನು ಲೂಟಿ ಹೊಡೆಯಲು ರಾಜ್ಯ ಸರ್ಕಾರದ ಮಟ್ಟದಲ್ಲೇ ಪ್ರಯತ್ನ ನಡೆಯುತ್ತಿದೆ. ಐಎಎಸ್ ಅಧಿಕಾರಿಗಳೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದರು. ಇದಕ್ಕೆ, ಅವಕಾಶ ನೀಡಬಾರದು” ಎಂದು ಹೇಳಿದ್ದಾರೆ.
“ಅಧಿಕಾರಿಗಳು ರೂಪಿಸಿದ್ದ ಸಂಚಿಗೆ ಸರ್ಕಾರವೂ ಬೆಂಬಲ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ರಚಿಸಿದ್ದ ನ್ಯಾಯಮೂರ್ತಿ ಬಿ ಸುದರ್ಶನ ರೆಡ್ಡಿ ನೇತೃತ್ವದ ಉನ್ನತಾಧಿಕಾರ ಪ್ರಾಧಿಕಾರವು ಆ ಸಂಚನ್ನು ವಿಫಲಗೊಸಿದೆ. ಆದರೆ, ಮುಂದೆ ಮತ್ತೆ ಇಂತಹ ಸಂಚುಗಳು ನಡೆಯುವ ಸಾಧ್ಯತೆಗಳಿದ್ದು, ನಿರಂತರ ಹೋರಾಟ ನಡೆಸಬೇಕಿದೆ” ಎಂದು ಹೇಳಿದ್ದಾರೆ.
“ಗಣಿ ಬಾಧಿತ ಪ್ರದೇಶಗಳಲ್ಲಿ ಯಾವ ರೀತಿಯ ಜನ ಕಲ್ಯಾಣ ಕಾರ್ಯಕ್ರಮ ರೂಪಿಸಬೇಕೆಂದು ಸುಪ್ರೀಂ ಕೋರ್ಟ್ ತನ್ನ 2024ರ ಮಾರ್ಚ್ 14ರ ತೀರ್ಪಿನಲ್ಲಿ ಹೇಳಿದೆ. ಕೆಎಂಇಆರ್‌ಸಿ ನಿಧಿಯನ್ನು ಆ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಈ ನಿಧಿಯು ಗಣಿಬಾಧಿಕ ಪ್ರದೇಶಗಳ ಜನರ ಭವಿಷ್ಯಕ್ಕೆ ಸಂಬಂಧಿಸಿದ್ದು, ಒಂದೊಂದು ಪೈಸೆಗೂ ಲೆಕ್ಕ ನೀಡಬೇಕಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.