ಮದ್ಯವ್ಯಸನಿಯೊಬ್ಬ ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ಯಾಮಾರಿಸಿ ಅವಾಂತರ ಸೃಷ್ಟಿಸಿರುವ ಘಟನೆ ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಕುಡುಕನ ಅವಾಂತರ ಕಂಡು ಪೊಲೀಸರೇ ಬೇಸ್ತು ಬಿದ್ದಿದ್ದಾರೆ.
ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕೆ ಎಂದು ಶೃಂಗೇರಿಗೆ ಬಂದಿದ್ದ ಬಸವರಾಜ್ ಎಂಬಾತ ಪೊಲೀಸರಿಗೆ ಕರೆ ಮಾಡಿ, ‘ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆ ಆಗಿದೆ’ ಎಂದು ಹೇಳಿದ್ದಾನೆ. ಅಲ್ಲದೆ, ಆ್ಯಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ, ‘ಗುಂಪು ಘರ್ಷಣೆಯಲ್ಲಿ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣ ಬನ್ನಿ’ ಎಂದು ಹೇಳಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಆ್ಯಂಬುಲೆನ್ಸ್ ಸಿಬ್ಬಂದಿ ತರಾತುರಿಯಿಂದ ಸ್ಥಳಕ್ಕೆ ಧಾವಿಸಿದ್ದಾರೆ.
ಮತ್ತೊಂದೆಡೆ, ಪೊಲೀಸರು ಕೂಡ ಶೃಂಗೇರಿ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಗುಂಪು ಘರ್ಷಣೆಯ ಯಾವುದೇ ಸುಳಿವು ಸಿಕ್ಕಿಲ್ಲ. ಬಳಿಕ ಕರೆ ಮಾಡಿ ತಿಳಿಸಿದ ವ್ಯಕ್ತಿಗೆ ಪುನಃ ಕಾಲ್ ಮಾಡಿದ್ದಾರೆ. ಪೊಲೀಸರಿಂದ ಕರೆ ಬಂದ ಕೂಡಲೇ ಮಾತನಾಡಿದ ಕುಡುಕ ಬಸವರಾಜ್, ‘ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ. ತಾಕತ್ತಿದ್ದರೆ ನನ್ನನ್ನು ಹುಡುಕಿ’ ಎಂದು ಸವಾಲು ಹಾಕಿದ್ದಾನೆ.
ಇದನ್ನೂ ಓದಿ: ಚಿಕ್ಕಮಗಳೂರು | ಜಮೀನು ವಿವಾದ; ಎರಡು ಕುಟುಂಬಗಳ ನಡುವೆ ಮಾರಾಮಾರಿ
ಬಸವರಾಜ್ ಮಾಡಿದ ಕೆಲಸಕ್ಕೆ 40 ಕಿಮೀ ದೂರದಿಂದ ಬಂದ ಆ್ಯಂಬುಲೆನ್ಸ್, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದೆ. ಗುಂಪು ಘರ್ಷಣೆ ಆತಂಕದಲ್ಲಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಕಂಗಾಲಾಗಿದ್ದಾರೆ.
ಕೊನೆಗೂ ಹುಸಿ ಕರೆ ಮಾಡಿದ್ದ ಬಸವರಾಜ್‌ನನ್ನು ಪೊಲೀಸರು ಪತ್ತೆಹಚ್ಚಿ ಬುದ್ಧಿ ಹೇಳಿ ಕಳಿಸಿದ್ದಾರೆ.