ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿನ ಡಾ. ಜಾಕಿರ್ ಹುಸೇನ್ ಮೊಹಲ್ಲಾ ಪ್ರದೇಶದಲ್ಲಿರುವ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಉನ್ನತೀಕರಿಸಬೇಕು ಎಂದು ಸ್ಥಳೀಯ ಪೋಷಕರು, ಸಮುದಾಯದ ಮುಖಂಡರು ಹಾಗೂ ವಿದ್ಯಾಭಿವೃದ್ಧಿ ಹಿತಚಿಂತಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿಯ ಸದಸ್ಯರಾದ ಶಬ್ಬೀರ್ ಅಹ್ಮದ್ ಅವರು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದು, ತ್ವರಿತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಈ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 213 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ ಈ ಶಾಲೆಯಲ್ಲಿ ಕೇವಲ 5 ಸರ್ಕಾರಿ ಶಿಕ್ಷಕರು ಮತ್ತು ಓರ್ವ ಅತಿಥಿ ಶಿಕ್ಷಕ ಮಾತ್ರ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ಇದರಿಂದಾಗಿ ಪಾಠದ ಗುಣಮಟ್ಟ ಮತ್ತು ಮಕ್ಕಳ ವೈಯಕ್ತಿಕ ಬೆಳವಣಿಗೆಗೆ ತೊಂದರೆಯಾಗಿದೆ ಎಂದು ಶಬ್ಬೀರ್ ಅಹ್ಮದ್ ತಿಳಿಸಿದ್ದಾರೆ.
ಅಲ್ಲದೇ, ಈ ಶಾಲೆಯಲ್ಲಿ 3 ಮಾತ್ರ ಬೋಧನಾ ಕೊಠಡಿಗಳು ಮತ್ತು ಒಂದು ಅಡುಗೆ ಕೋಣೆ ಮಾತ್ರ ಇವೆ. ಶಾಲೆಗೆ ಸಂಬಂಧಿಸಿದ ಪರಿಶೀಲನಾ ದಾಖಲೆ ಪ್ರಕಾರ, ಗಂಡು ಮಕ್ಕಳಿಗೆ ಎರಡು ಮತ್ತು ಹೆಣ್ಣು ಮಕ್ಕಳಿಗೆ ಎರಡೇ ಶೌಚಾಲಯಗಳಿವೆ. ಈ ಸೌಲಭ್ಯಗಳು ಮಕ್ಕಳಿಗೆ ಸಾಕಾಗುತ್ತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಈ ಶಾಲೆಯ 213 ವಿದ್ಯಾರ್ಥಿಗಳಿದ್ದು, ಈ ಪೈಕಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದಿಂದ ಬಂದವರು. ಶಾಲೆಯು ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಪ್ರಮುಖ ಆಧಾರವಾಗಿದ್ದು, ಬಹುಮಟ್ಟಿಗೆ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ಈ ಶಾಲೆಯ ಮೂಲಕ ರೂಪಿಸುತ್ತಿದ್ದಾರೆ.
ಈ ಶಾಲೆಯನ್ನು ಮೌಲಾನಾ ಆಜಾದ್ ಮಾದರಿ ಶಾಲೆಯಾಗಿ ಘೋಷಿಸಿದರೆ ಅಧ್ಯಾಪಕರ ಸಂಖ್ಯೆ ಹೆಚ್ಚಿಸಿ ಗುಣಮಟ್ಟದ ಪಾಠ ನೀಡಲು ಸಾಧ್ಯವಾಗುತ್ತದೆ. ಕೊಠಡಿಗಳು, ಶೌಚಾಲಯಗಳು, ಪೀಠೋಪಕರಣಗಳು, ಆಟದ ಸಾಮಗ್ರಿಗಳು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯ ಸೌಲಭ್ಯಗಳು ಸಿಗಬಹುದು ಎಂದು ಪೋಷಕರು ಒತ್ತಾಯಿಸಿದ್ದಾರೆ.
ಶಾಲೆಯು ಮಾದರಿ ಶಾಲೆಯಾಗಿ ಪರಿವರ್ತಿತವಾದರೆ ನಮ್ಮ ಮಕ್ಕಳು ದೂರದ ಶಾಲೆಗಳಿಗೆ ಹೋಗಬೇಕಾಗುವುದಿಲ್ಲ. ನಮ್ಮ ಊರಿನಲ್ಲಿಯೇ ಉತ್ತಮ ಶಿಕ್ಷಣ ಸಿಗಲಿದೆ ಎಂದು ಪಾಲಕರು ತಮ್ಮ ಭಾವನೆ ಹಂಚಿಕೊಂಡಿದ್ದಾರೆ.

ಈ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಮತ್ತು ಸರ್ಕಾರಿ ಉದ್ದೇಶಿತ ‘ಮೌಲಾನಾ ಆಜಾದ್ ಮಾದರಿ ಶಾಲೆಗಳ’ ಉದ್ದೇಶ ಸಫಲವಾಗಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಶಬ್ಬೀರ್ ಅಹ್ಮದ್ ತಮ್ಮ ಮನವಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯಕ್ಕೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
ಈ ಪ್ರಸ್ತಾಪ ಪ್ರಧಾನಮಂತ್ರಿ ಹೊಸ 15 ಅಂಶಗಳ ಕಾರ್ಯಕ್ರಮದ ಅಡಿಯಲ್ಲಿ ಬರುವ ಯೋಜನೆಗಳ ಒಂದು ಭಾಗವಾಗಿದ್ದು, ಅಲ್ಪಸಂಖ್ಯಾತ ಸಮುದಾಯದ ಸಕಾರಾತ್ಮಕ ಶೈಕ್ಷಣಿಕ ಉನ್ನತಿಯತ್ತ ಹೆಜ್ಜೆ ಇಡಲಿದೆ ಎಂದು ತಿಳಿಸಿದ್ದಾರೆ.
