ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಗಿಡಗಳನ್ನು ಬೆಳೆಸಿ, ಪೋಷಿಸಿ ಸಮಾಜಕ್ಕೆ ಹಾಗೂ ಮುಂದಿನ ಜನಾಂಗಕ್ಕೆ ನಾವು ಕೊಡುಗೆಯಾಗಿ ನೀಡಬೇಕು ಎಂದು ಶ್ರೀರಂಗಪಟ್ಟಣದ ರೋಟರಿ ಕ್ಲಬ್‌ನ ಅಧ್ಯಕ್ಷ ಮಂಜುರಾಮ್ ಹೇಳಿದರು.
ಶ್ರೀರಂಗಪಟ್ಟಣ ಬಳಿಯ ಕರಿಘಟ್ಟದ ಲೋಕಪಾವನಿ ನದಿ ತೀರದಲ್ಲಿ ರೋಟರಿ ಸಂಸ್ಥೆ, ಅಚಿವರ್ಸ್ ಅಕಾಡೆಮಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಮಂಜುರಾಮ್ ಅವರ ಜನ್ಮದಿನವೂ ಶನಿವಾರವೇ ಇದ್ದುದರಿಂದ ಗಿಡ ನೆಡುವ ಮೂಲಕ, ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅಚೀವರ್ಸ್ ಅಕಾಡೆಮಿಯ ಅಧ್ಯಕ್ಷರಾದ ಡಾ. ರಾಘವೇಂದ್ರ, ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸರಸ್ವತಿ, ಪಟ್ಟಣದ ಸಾಮಾಜಿಕ ಅರಣ್ಯ ಅಧಿಕಾರಿ ನಾಗರಾಜೇಗೌಡ, ರೋಟರಿ ಸದಸ್ಯರಾದ ಆಕಾಶ್, ರೇಖಾ , ಪುನೀತ್, ದರ್ಶನ್, ಛಾಯ, ಹಾಗೂ ವಿದ್ಯಾರ್ಥಿಗಳು ಈ ಕಾಯಕದಲ್ಲಿ ಕೈಜೋಡಿಸಿದರು.