ಅತೀ ಶೀಘ್ರದಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆಗೆಯಬೇಕು. ಹಾಲು ಉತ್ಪಾದಕರಿಗೆ ಕೊಡಬೇಕಾದ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ರೈತರು ಪ್ರತಿ ಸಮಸ್ಯೆಗೂ ಹೋರಾಟ ಮಾಡಿಯೇ ಪರಿಹಾರ ಪಡೆಯಬೇಕಾದ ಅನಿವಾರ್ಯತೆ ಬಂದಿದೆ. ಇನ್ನೂ ಎಷ್ಟು ದಿನ ಹೀಗೆಯೇ ನಡೆಯಬೇಕು ಎಂದು ಕೆಂಪೂಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘವು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ರೈತರು, ಕೃಷಿಕಾರ್ಮಿಕರು, ದಸಂಸ ಮುಖಂಡರು, ಕನ್ನಡಪರ ಸಂಘಟನೆಗಳು ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು.

ನಮ್ಮನ್ನು ಆಳುವ ಸರ್ಕಾರಗಳು ರೈತರ ಹಿತ ಕಾಪಾಡುವ ಬರವಸೆ ನೀಡಿ ಮತಗಳಿಸಿ ಅಧಿಕಾರಕ್ಕೆ ಬಂದ ನಂತರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ರೈತರು ಬೆಲೆ ಏರಿಕೆ, ಗೊಬ್ಬರದ ದರ ಏರಿಕೆ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಸಾಲದ ಸುಳಿಗೆ ಸಿಕ್ಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರೈತರು ವ್ಯವಸಾಯದಿಂದ ದೂರ ಉಳಿಯುತ್ತಿದ್ದಾರೆ. ಇದೆಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದರೆ ರೈತರ ಹಾಗೂ ಹಳ್ಳಿಗಾಡಿನ ಜನಜೀವನ ಸಂಪೂರ್ಣ ನಾಶವಾಗುವ ಕಾಲ ಬಹಳ ದೂರವಿಲ್ಲ. ಈಗ ರೈತರು ಹಾಗೂ ಕೃಷಿಕಾರ್ಮಿಕರು ಪಕ್ಷ ಬೇಧ ಮರೆತು ಸಂಘಟಿತರಾಗಿ ಹೋರಾಟ ಮಾಡಲೇ ಬೇಕಾಗಿದೆ ಎಂದರು.
ನಂತರ ತಾಲೂಕು ಅಧಿಕಾರಿಗಳಿಗೆ ರೈತರು ಈ ಕೆಳಗಿನ ಹಕ್ಕೊತ್ತಾಯಗಳನ್ನು ಸಲ್ಲಿಸಿದರು. ಅತೀ ಶೀಘ್ರದಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯುವುದು. ಹಾಲು ಉತ್ಪಾದಕರಿಗೆ ಕೊಡಬೇಕಾದ ಪ್ರೋತ್ಸಾಹಧನ ಬಿಡುಗಡೆ ಮಾಡುವುದು. ರೈತ ಪಹಣಿಯಲ್ಲಿ ನಮೂದಿಸಲಾಗಿರುವ ವಕ್ಫ್ ಹೆಸರನ್ನು ತೆಗೆದು ಹಾಕುವುದು, ರೈತರಿಗೆ ಸರಬರಾಜು ಮಾಡುತ್ತಿರುವ ವಿದ್ಯುತನ್ನು ಹಗಲು ವೇಳೆಯಲ್ಲಿ 10 ಗಂಟೆಗಳ ಕಾಲ ಸರಬರಾಜು ಮಾಡಲು ಕ್ರಮ ವಹಿಸುವುದು. ಹೊಸದಾಗಿ ಕೊಳವೆ ಬಾವಿ ಕೊರೆಸುವ ರೈತರಿಗೆ ವಿದ್ಯುತ್ ಸರಬರಾಜು ಮಾಡಲು ಹಿಂದೆ ಇದ್ದ ರೀತಿಯಲ್ಲಿ ಮುಂದುವರೆಸುವುದು. ಸರ್ಕಾರಿ ಜಮೀನು ಮತ್ತು ಅರಣ್ಯ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡುತ್ತಿದ್ದು ಸರ್ಕಾರ ಕೂಡಲೇ ಇದನ್ನು ತಡೆಗಟ್ಟಬೇಕು. ಸರ್ವೆ ನಂಬರ್ 15 ರಲ್ಲಿ ನಾಗರಘಟ್ಟ ಗ್ರಾಮದಲ್ಲಿ ರಸ್ತೆ ಸೇರಿಸಿ ದುರಸ್ತಿ ಮಾಡಿರುವುದನ್ನು ಕೂಡಲೇ ರದ್ದುಪಡಿಸಿ ರೈತರಿಗೆ ತಿರುಗಾಡಲು ಎಂದಿನಂತೆ ರಸ್ತೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ಸಾಲಿನಲ್ಲಿ ಸರಬರಾಜು ಮಾಡಿದ ಕಬ್ಬಿಗೆ ನೀಡಬೇಕಾದ ರೂ.150 ಬಾಕಿಯನ್ನು ಕೂಡಲೇ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳುವುದು, ಸರ್ಕಾರಿ ಕಚೇರಿಗಳಲ್ಲಿ ರೈತರು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸೀಟ್ ಬೆಲ್ಟ್ ಧರಿಸದ ಚಾಲಕನಿಗೆ ₹18 ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು!
ಈ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷರಾದ ಶಂಭುಗೌಡ, ಕಾರ್ಯದರ್ಶಿ ಕೇಶವ್, ಪಾಲಹಳ್ಳಿ ರಾಮೇಗೌಡ, ಪಾಂಡು, ಜಯರಾಮೇಗೌಡ, ಕಡತನಾಳು ಬಾಲಕೃಷ್ಣ, ಸ್ವಾಮಿಗೌಡ, ಮರಳಗಾಲ ಕೃಷ್ಣೇಗೌಡ, ಪಾಂಡವಪುರ ತಾಲ್ಲೂಕು ಅಧ್ಯಕ್ಷರಾದ ಕೆನ್ನಾಳು ನಾಗರಾಜು, ಕೆನ್ನಾಳು ವಿಜಯ್ ಕುಮಾರ್, ರಘು ಎಣ್ಣೆಹೊಳೆ, ಪ್ರಿಯಾ ರಮೇಶ್ ಸೇರಿದಂತೆ ಶ್ರೀರಂಗಪಟ್ಟಣ ತಾಲೂಕು ರೈತ ಸಂಘದ ಕಾರ್ಯಕರ್ತರು ಇದ್ದರು.