ಮೈಸೂರು ಸಂಸ್ಥಾನದ ನವಾಬನಾಗಿದ್ದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ತನ್ನ ರಾಜ್ಯದಲ್ಲಿ ಗೋ ಹತ್ಯೆಯನ್ನು ನಿಷೇಧಿಸಿದ್ದರು ಎಂದು ನಿವೃತ್ತ ನ್ಯಾಯಾಧೀಶ ವಸಂತ್ ಮುಳಸಾವಳಗಿ ಅಭಿಪ್ರಾಯಿಸಿದರು.
ಶ್ರೀರಂಗಪಟ್ಟಣದ ಭಾನುವಾರ ಸುಬ್ರಮಣ್ಯ ಕಲ್ಯಾಣ ಮಂದಿರದಲ್ಲಿ ಮುಸ್ಲಿಂ ಸೌಹಾರ್ದ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವೀನ್ ಸೂರಿಂಜೆ ಅವರ ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ‘ ಕೃತಿ ಬಿಡುಗಡೆ ಕಾರ್ಯಕರ್ಮದಲ್ಲಿ ಮಾತನಾಡಿ, “ಮೈಸೂರು ಸಾಮ್ರಾಜ್ಯದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದ ಕಾರಣ ಅವರ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಗೋ ಹತ್ಯೆಯನ್ನು ನಿಷೇಧಿಸಲಾಗಿತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿಯೂ ಕೂಡ ಈ ನಿಯಮ ಜಾರಿಯಲ್ಲಿತ್ತು” ಎಂದು ಅಭಿಪ್ರಾಯಪಟ್ಟರು.
“ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಸೋತಾಗ ದೇವಾಲಯಗಳನ್ನು ಒತ್ತೆ ಇಡುವಂತೆ ಬ್ರಿಟಿಷರು ಪ್ರಸ್ತಾಪ ಇಟ್ಟಿದ್ದರು ಆದರೆ ಅದನ್ನು ಟಿಪ್ಪು ನಿರಾಕರಿಸಿ ತನ್ನ ಇಬ್ಬರು ಗಂಡು ಮಕ್ಕಳನ್ನು ಒತ್ತೆಯಾಗಿ ಇಟ್ಟನು. ರೈತರಿಗೆ ವ್ಯವಸಾಯಕ್ಕೆ ಅನುಕೂಲಕ್ಕಾಗಿ ತಕ್ಕಾವಿ ಸಾಲ, ವಾಣಿಜ್ಯ ಬೆಳೆಗಳ ಪರಿಚಯ, ಮಧ್ಯ ಮತ್ತು ಜೂಜು ನಿಷೇಧ, ಮಲಬಾರ್ ನಲ್ಲಿ ಮಹಿಳೆಯರ ಮೇಲು ವಸ್ತ್ರ ಧರಿಸುವಂತೆ ಕಾನೂನು ಮಾಡಿದ್ದು ಟಿಪ್ಪು ಸುಲ್ತಾನ್” ಎಂದು ಹೇಳಿದರು.
ಹಿರಿಯ ಗಾಂಧಿವಾದಿಗಳಾದ ಡಾ ಬಿ ಸುಜಯ್ ಕುಮಾರ್ ಮಾತನಾಡಿ “ಮೈಸೂರು ಸಂಸ್ಥಾನದ ಜನರು ಹೈದರ್ ಮತ್ತು ಟಿಪ್ಪು ಸುಲ್ತಾನ್ ಆಡಳಿತ ಬಗ್ಗೆ ವಿಶ್ವಾಸವಿಟ್ಟಿದ್ದರು. ಹೈದರಾಲಿ ಮತ್ತು ಟಿಪ್ಪು ಆಡಳಿತ ಕೇಂದ್ರವಾದ ಶ್ರೀರಂಗಪಟ್ಟಣದಲ್ಲಿ ಇದುವರೆಗೂ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ, ಈಗಲೂ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ” ಎಂದು ಹೇಳಿದರು.
ಪ್ರಜ್ಞಾವಂತ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ ಎಸ್ ವೆಂಕಟೇಶ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಅಬ್ದುಲ್ ಬೇಕ್ ಹಾಗೂ ಭತ್ತ ಮತ್ತು ಮಾವಿನ ತಳಿಗಳ ಸಂರಕ್ಷಕ ಸೈಯದ್ ಘನಿ ಖಾನ್ ಅವರಿಗೆ ಸೌಹಾರ್ದ ಸೇತು ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕೃತಿಯ ಲೇಖಕ ನವೀನ್ ಸೂರಿಂಜೆ ಮಾತನಾಡಿ “ಇದುವರೆಗೂ ಸಾಕಷ್ಟು ಪುಸ್ತಕಗಳನ್ನು ಪರಮಾರ್ಶೆ ಮಾಡಿ ʼಕರಾವಳಿಯ ಚರಿತ್ರೆಯಲ್ಲಿ ಹೈದರ್ ಮತ್ತು ಟಿಪ್ಪು ಸುಲ್ತಾನ್ʼ ಕೃತಿಯನ್ನು ಬರೆದಿದ್ದೇನೆ ಎಲ್ಲವೂ ಅಧಿಕೃತ ದಾಖಲೆಗಳಿಂದ ಕೂಡಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಸ್ಲಿಮ್ ಸೌಹಾರ್ದ ಒಕ್ಕೂಟದ ಗೌರವಾಧ್ಯಕ್ಷ ಪ್ರೊಫೆಸರ್ ಇಲ್ಯಾಸ್ ಅಹಮದ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಪ್ರಾಧ್ಯಾಪಕಿ ಪ್ರೊಫೆಸರ್ ಹಸೀನಾ ಬೇಗಮ್, ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಬಿ ಬಸವಲಿಂಗಯ್ಯ, ಪತ್ರಕರ್ತ ಸವಿತಾ ಪಾ ಮಲ್ಲೇಶ್, ಕಾರ್ಮಿಕ ಮುಖಂಡ ಜಿ ರಾಮಕೃಷ್ಣ, ಪ್ರೊಫೆಸರ್ ನಾಜಿಯಾ ಕೌಸರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಖ್ಯಾತನಹಳ್ಳಿ ಚಂದ್ರಣ್ಣ, ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಸಂಜೆಯ ಪ್ರಕಾಶನದ ಎಸ್ ಎಂ ಶಿವಕುಮಾರ್, ಮುಸ್ಲಿಂ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಅಫ್ಸರ್ ಖಾನ್, ರೈತ ಮುಖಂಡ ಪಾಂಡು, ಸಿಂಧುವಳ್ಳಿ ಅಕ್ಬರ್, ಅಯೂಬ್, ಸಕುರ್ ಸಾಬ್, ಚಿಕ್ಕ ತಮ್ಮೇಗೌಡ, ರೇಷ್ಮಾ ಇದ್ದರು.





