ಸಾಮಾಜಿಕ ಸಮತೋಲನ, ಅಸ್ಮಿತೆ ಆಧಾರಿತ ಒಕ್ಕೂಟ ರಾಜಕಾರಣದ ಅನಿವಾರ್ಯತೆ ಅಥವಾ 2022 ಮತ್ತು 2024ರ ಚುನಾವಣಾ ಹಿನ್ನಡೆಗಳಿಂದ ಪಾಠ … ಕಾರಣ ಯಾವುದೇ ಇರಲಿ, ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಂತ್ರಿ ಮಂಡಲದಲ್ಲಿ ಇತರ ಹಿಂದುಳಿದ ವರ್ಗಗಳು (OBC) ಮತ್ತು ದಲಿತ ಜಾತಿಗಳ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚಾಗಿದೆ. ಉತ್ತರ ಪ್ರದೇಶವು ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಲಿದ್ದು, ಚುನಾವಣಾ ವರ್ಷಕ್ಕೆ ಮುಂಚಿತವಾಗಿ ಸಂಪುಟ ವಿಸ್ತರಣೆಯ ಕಸರತ್ತು ನಡೆದಿದೆ. ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಯೋಗಿಗೆ ಸೋಲಿನ ಭಯವು ಸಂಪುಟ ವಿಸ್ತರಣೆಯ ಅನಿವಾರ್ಯತೆಯನ್ನು ಸೃಷ್ಟಿಸಿದೆಯೇ ಎಂಬ ಪ್ರಶ್ನೆಗಳೂ ಇವೆ.
2017ರಲ್ಲಿ ಯೋಗಿ ಅಧಿಕಾರಕ್ಕೆ ಬಂದಾಗಿನಿಂದ ಹಂಚಿಕೆ ಮಾಡಲಾದ ಸಚಿವ ಸ್ಥಾನಗಳ ಕುರಿತು ವಿಶ್ಲೇಷಿಸಿದರೆ, ಈಗ, ಅವರ ಸಂಪುಟದ ಜಾತಿ ಸಮೀಕರಣದಲ್ಲಿ ಆಗಿರುವ ಮಹತ್ವದ ಬದಲಾವಣೆಗಳು ಸ್ಪಷ್ಟವಾಗಿ ಕಾಣುತ್ತವೆ. ತಮ್ಮ ಮೊದಲ ಅವಧಿಗೆ ಹೋಲಿಸಿದರೆ, ಆದಿತ್ಯನಾಥ್ ಅವರ ಪ್ರಸ್ತುತ ಅವಧಿಯು ಸಾಂಪ್ರದಾಯಿಕ ‘ಪ್ರಬಲ ಜಾತಿ’ಗಳಿಗಿಂತ ಒಬಿಸಿ ಮತ್ತು ದಲಿತರಿಗೆ ಗಮನಾರ್ಹವಾಗಿ ಹೆಚ್ಚಿನ ಸ್ಥಾನವನ್ನು ನೀಡಲಾಗಿದೆ.
ಆದಾಗ್ಯೂ, ಶೋಷಿತ ಮತ್ತು ಹಿಂದುಳಿದ ಹಿಂದು ಸಮುದಾಯಗಳ ಪ್ರಾತಿನಿಧ್ಯದಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದ್ದರೂ, ಬಿಜೆಪಿ ಆಡಳಿತದಲ್ಲಿ ಮೇಲ್ಜಾತಿಗಳು, ವಿಶೇಷವಾಗಿ ಬ್ರಾಹ್ಮಣರು ಮತ್ತು ಠಾಕೂರರು ತಮ್ಮ ಜನಸಂಖ್ಯೆಗಿಂತ ಅಸಮಾನವಾಗಿ ಹೆಚ್ಚಿನ ಸಚಿವ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಈಗ, ಯೋಗಿ ಸಂಪುಟದಲ್ಲಿ ಬ್ರಾಹ್ಮಣರು ಮತ್ತು ಠಾಕೂರರು ಒಟ್ಟು 15 ಸಚಿವ ಸ್ಥಾನಗಳನ್ನು ಹೊಂದಿದ್ದರು. ಇದು ಒಟ್ಟು ಸ್ಥಾನಗಳಲ್ಲಿ 25%ರಷ್ಟಿದೆ. ಇದಕ್ಕೆ ಹೋಲಿಸಿದರೆ, ರಾಜ್ಯದ ಜನಸಂಖ್ಯೆಯ 21.5%ರಷ್ಟಿರುವ ದಲಿತರು ಸಂಪುಟದಲ್ಲಿ ಕೇವಲ 18%ರಷ್ಟು ಪ್ರಾತಿನಿಧ್ಯ ಹೊಂದಿದ್ದಾರೆ. ಇದು, ಯೋಗಿಯ ಮೊದಲ ಅವಧಿಯಲ್ಲಿದ್ದ 15%ರಷ್ಟು ಪ್ರಾತಿನಿಧ್ಯಕ್ಕಿಂತ ಕೊಂಚ ಹೆಚ್ಚಾಗಿದೆ.
ಯುಪಿಯಲ್ಲಿ ಯೋಗಿ ಭವಿಷ್ಯದ ದೃಷ್ಟಿ
ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷಕ್ಕಿಂತ ಕಡಿಮೆ ಸಮಯ ಬಾಕಿ ಇರುವಾಗ, ಬಿಜೆಪಿ ತನ್ನ ಜಾತಿ ಸಮೀಕರಣವನ್ನು ಸರಿಹೊಂದಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. 2014 ಮತ್ತು 2017ರ ಚುನಾವಣೆಗಳಲ್ಲಿ ದೇಶದ ಅತಿ ದೊಡ್ಡ ಮತ್ತು ಚುನಾವಣಾ ದೃಷ್ಟಿಯಿಂದ ಅತ್ಯಂತ ಮಹತ್ವದ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಭಾರಿ ಜಯ ಸಾಧಿಸಿದ್ದ ಬಿಜೆಪಿ, ನಂತರದ ದಿನಗಳಲ್ಲಿ ನಿರಂತರವಾಗಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಅದರಲ್ಲೂ, 2024 ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನವು, 2027ರ ವಿಧಾನಸಭಾ ಚುನಾವಣೆಯನ್ನು ದೊಡ್ಡ ಸವಾಲನ್ನಾಗಿ ಮಾಡಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಾರ್ಯತಂತ್ರವು ಪ್ರಮುಖವಾಗಿ ಜಾತಿ ರೇಖೆಗಳನ್ನು ಮೀರಿ ಹಿಂದುಗಳ ಒಗ್ಗಟ್ಟು ಮತ್ತು ಪ್ರಾತಿನಿಧ್ಯವನ್ನು ಬಿಂಬಿಸುವುದರ ಮೇಲೆ ಅವಲಂಬಿತವಾಗಿದೆ. ಇತ್ತೀಚೆಗೆ, ಆದಿತ್ಯನಾಥ್ ಅವರು ತಮ್ಮ ಮಂತ್ರಿ ಮಂಡಲವನ್ನು ಗರಿಷ್ಠ ಮಿತಿಯಾದ 60ಕ್ಕೆ ವಿಸ್ತರಿಸಿದರು. ಇಬ್ಬರು ಕ್ಯಾಬಿನೆಟ್ ಸಚಿವರು ಸೇರಿದಂತೆ ಆರು ಹೊಸ ಸಚಿವರನ್ನು ಸೇರಿಸಿಕೊಂಡರು. ಈ ಆರು ಹೊಸ ಸಚಿವರಲ್ಲಿ ಐದು ಮಂದಿ ಹಿಂದುಳಿದ ಮತ್ತು ದಲಿತ ಹಿಂದು ಜಾತಿಗಳಿಗೆ ಸೇರಿದವರಾಗಿದ್ದಾರೆ. ವಿವಿಧ ಹಿಂದು ‘ಜಾತಿಗಳ’ ನಡುವೆ ಸಮತೋಲನವನ್ನು ಬಿಂಬಿಸುವ ಯೋಜಿತ ಕಾರ್ಯತಂತ್ರದ ಭಾಗವಾಗಿ ಈ ಸಮುದಾಯಗಳ ಸಚಿವರನ್ನು ಸೇರ್ಪಡೆ ಮಾಡಲಾಗಿದೆ.
ಈ ಜಾತಿ ಮರುಹೊಂದಾಣಿಕೆಯು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ನೇತೃತ್ವದ ವಿಪಕ್ಷಗಳ ತೀವ್ರ ಜಿಗಿತದಿಂದ ಬಿಜೆಪಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರತಿಕ್ರಿಯೆಯಾಗಿದೆ. ಎಸ್ಪಿ ಮುಖ್ಯಸ್ಥರು ಕಠಿಣ ‘ಮುಸ್ಲಿಂ-ಯಾದವ್’ ಇಮೇಜ್ನಿಂದ ಹೊರಬಂದು, ಪಿಡಿಎ (ಪಿಚ್ಡಾ-ದಲಿತ-ಅಲ್ಪಸಂಖ್ಯಾತ) ಘೋಷಣೆಯಡಿ ವಿಶಾಲವಾದ ಜಾತಿ ಒಕ್ಕೂಟವನ್ನು ರಚಿಸಲು ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ. ಕನ್ಶಿರಾಮ್ ಅವರ ‘ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ’ ಸೂತ್ರವನ್ನು ಅಖಿಲೇಶ್ ಅನುಸರಿಸಲು ಮುಂದಾಗಿದ್ದಾರೆ. ಈ ಮಂಡಲ್ ರಾಜಕಾರಣದ ಮರುಶೋಧನೆಯು ರಾಜ್ಯದಲ್ಲಿ ಜಾತಿ ರಾಜಕಾರಣವನ್ನು ಗಣನೀಯವಾಗಿ ಬದಲಾಯಿಸಿದೆ.
ಈ ಲೇಖನ ಓದಿದ್ದೀರಾ?: ಪ್ರಜಾಪ್ರಭುತ್ವ ದಮನಕ್ಕೆ ಮೋದಿ ‘SIR’ ಅಸ್ತ್ರ ಬಳಸುತ್ತಿರುವುದು ಯಾಕೆ?
ಆದಿತ್ಯನಾಥ್ ಅವರ ಮೊದಲ ಅವಧಿಯಲ್ಲಿ (2017-2022), 60 ಸಚಿವರ ಪೈಕಿ 27 (45%) ಪ್ರಬಲ ಜಾತಿಯವರಿದ್ದರು, 23 (38.3%) ಒಬಿಸಿ ಮತ್ತು 9 (15%) ದಲಿತರಿದ್ದರು. ಇದಕ್ಕೆ ಹೋಲಿಸಿದರೆ, ಅವರ ಎರಡನೇ ಅವಧಿಯಲ್ಲಿ ಒಬಿಸಿ ಮತ್ತು ದಲಿತ ಪ್ರಾತಿನಿಧ್ಯದ ಪಾಲು ಹೆಚ್ಚಾಗಿದೆ. ಪ್ರಬಲ ಜಾತಿಗಳ ಸಚಿವರ ಸಂಖ್ಯೆ ಕುಸಿದಿದೆ: 60 ಸಚಿವರಲ್ಲಿ 26 (43.3%) ಒಬಿಸಿ, 22 (36.7%) ಪ್ರಬಲ ಜಾತಿ ಹಾಗೂ 11 (18.3%) ದಲಿತರಿದ್ದಾರೆ. ಮುಸ್ಲಿಮರ ಸಂಖ್ಯೆ ಎರಡೂ ಅವಧಿಯಲ್ಲಿ ಕೇವಲ ಒಬ್ಬರಿಗೆ ಸೀಮಿತವಾಗಿದೆ.
ರಾಜ್ಯದಲ್ಲಿ ಒಬಿಸಿಗಳು 40 ರಿಂದ 45%ರಷ್ಟು ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಏಕೈಕ ದೊಡ್ಡ ಸಮುದಾಯವಾಗಿದ್ದಾರೆ. ದಲಿತರು 21.5% ಮತ್ತು ಮುಸ್ಲಿಮರು 19.5% ರಷ್ಟಿದ್ದಾರೆ. ಬ್ರಾಹ್ಮಣರು, ತ್ಯಾಗಿಗಳು, ಭೂಮಿಹಾರ್ಗಳು, ಠಾಕೂರರು, ಬನಿಯಾಗಳು, ಕಾಯಸ್ಥರು ಮುಂತಾದ ಪ್ರಬಲ ಜಾತಿಗಳು 14%ರಷ್ಟಿದ್ದಾರೆ.
ಮುಸ್ಲಿಮರ ವೆಚ್ಚ – ಪ್ರಬಲ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ
ಬಿಜೆಪಿ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ, ಪ್ರಬಲ ಜಾತಿಗಳು ಇಂದಿಗೂ ಅತಿ ಹೆಚ್ಚಿನ ಪ್ರಾತಿನಿಧ್ಯವನ್ನು ಪಡೆಯುತ್ತಿವೆ. ಮುಸ್ಲಿಮರನ್ನು ಸಚಿವರನ್ನಾಗಿ ಮಾಡುವ ಅಗತ್ಯವಿಲ್ಲದ ಕಾರಣ, ಪಕ್ಷವು ಹೆಚ್ಚು ಒಬಿಸಿ ಮತ್ತು ದಲಿತರನ್ನು ಸಚಿವರನ್ನಾಗಿ ಮಾಡಬಹುದು. ಆದರೆ, ಪಕ್ಷವು ಮುಸ್ಲಿಮರಿಗೆ ಕೊಡಬೇಕಿದ್ದ ಪಾಲನ್ನು ಪ್ರಬಲ ಜಾತಿಗಳಿಗೇ ಹಂಚುತ್ತಿದೆ.
ಬಿಜೆಪಿ ಸರ್ಕಾರದ ಎರಡು ಅವಧಿಗಳ ಸಚಿವರ ಜಾತಿ ಸಮೀಕರಣದಲ್ಲಿ ಯಾದವರನ್ನು ಹೊರಗಿಡಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎರಡೂ ಆದಿತ್ಯನಾಥ್ ಸರ್ಕಾರಗಳಲ್ಲಿ ಕೇವಲ ಒಬ್ಬರೇ ಯಾದವ ಸಮುದಾಯದ ಸಚಿವರಿದ್ದಾರೆ. ಪ್ರಸ್ತುತ ಯುಪಿಯ 26 ಒಬಿಸಿ ಸಚಿವರಲ್ಲಿ 25 ಮಂದಿ ಯಾದವೇತರ ಒಬಿಸಿಗಳಿಗೆ ಸೇರಿದವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿಯ ದೀರ್ಘಕಾಲದ ಪ್ರಾಬಲ್ಯವನ್ನು ಎದುರಿಸಲು, ಬಿಜೆಪಿಯ ತಂತ್ರವು ಮುಸ್ಲಿಂ, ಯಾದವ್ ಹಾಗೂ ಜಾಟ್ ಮತದಾರರನ್ನು ಪ್ರತ್ಯೇಕಿಸಿ, ಉಳಿದ ಹಿಂದು ಸಮುದಾಯಗಳನ್ನು — ಅಂದರೆ ಪ್ರಬಲ ಜಾತಿ, ಯಾದವೇತರ ಒಬಿಸಿಗಳು ಹಾಗೂ ಜಾಟ್ಯೇತರ ದಲಿತರನ್ನು ಸೆಳೆಯುವುದರ ಮೇಲೆ ಕೇಂದ್ರೀಕೃತವಾಗಿದೆ.
ಗಮನಾರ್ಹವೆಂದರೆ, ಹಿಂದಿನ ಸಮಾಜವಾದಿ ಪಕ್ಷದ ನೇತೃತ್ವದ ಸರ್ಕಾರಗಳ ವಿರುದ್ಧ ಗಂಭೀರ ನಿರೂಪಣೆ ಹೆಣೆದಿದ್ದ ಬಿಜೆಪಿ, ‘ಎಸ್ಪಿ ಸರ್ಕಾರಗಳು ಮುಸ್ಲಿಮರನ್ನು ಓಲೈಸಿದವು ಮತ್ತು ಯಾದವರಿಗೆ ಎಲ್ಲ ಸವಲತ್ತುಗಳು, ಉದ್ಯೋಗಗಳು ಹಾಗೂ ಸರ್ಕಾರದ ಅಧಿಕಾರವನ್ನು ನೀಡಿದವು. ಆದರೆ, ಇತರ ಹಿಂದುಳಿದ ಜಾತಿಗಳು ಮತ್ತು ದಲಿತರನ್ನು ನಿರ್ಲಕ್ಷಿಸಿದವು’ ಎಂಬುದನ್ನು ತೀವ್ರವಾಗಿ ಪ್ರಚಾರ ಮಾಡಿತ್ತು.
ಆದಾಗ್ಯೂ, ದೀರ್ಘಕಾಲದಿಂದ ಅಧಿಕಾರದಿಂದ ಹೊರಗಿರುವ ಅಖಿಲೇಶ್ ಯಾದವ್ ಅವರು ಹಿಂದುಳಿದ ಹಿಂದು ಜಾತಿಗಳನ್ನು ಮತ್ತು ಗಣನೀಯ ಮುಸ್ಲಿಂ ಜನಸಂಖ್ಯೆಯನ್ನು ಒಟ್ಟುಗೂಡಿಸಿ ಹೊಸ ತಂತ್ರ ರೂಪಿಸಿದ್ದಾರೆ. ಇದರಿಂದ, ಬಿಜೆಪಿ ಕಳೆದ ಎರಡು ಚುನಾವಣೆಗಳಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. 2022ರ ಫಲಿತಾಂಶವು ಅಖಿಲೇಶ್ ಯಾದವ್ ಅವರನ್ನು ಬಿಜೆಪಿಗೆ ಗಂಭೀರ ಸವಾಲುಗಾರನನ್ನಾಗಿಯೂ ರೂಪಿಸಿದೆ. 2024ರಲ್ಲಿ ಎಸ್ಪಿ ನೇತೃತ್ವದ ಇಂಡಿಯಾ ಮೈತ್ರಿಕೂಟವು ಬಿಜೆಪಿಗೆ ಭಾರಿ ಪೆಟ್ಟು ನೀಡಿದೆ. ಇದು ರಾಜ್ಯದಲ್ಲಿ ಒಬಿಸಿ ಸಂಸದರ ಸಂಖ್ಯೆ ಹೆಚ್ಚಾಗಲು ಕಾರಣವೂ ಆಗಿದೆ. 2024ರಲ್ಲಿ ಚುನಾಯಿತರಾದ ವಿರೋಧ ಪಕ್ಷದ ಸಂಸದರಲ್ಲಿ ಬಹುತೇಕ ಅರ್ಧದಷ್ಟು, 43 ರಲ್ಲಿ 21 ಒಬಿಸಿಗಳಾಗಿದ್ದಾರೆ.
14 ವರ್ಷಗಳ ಹಿಂದೆ ಅಖಿಲೇಶ್ ಯಾದವ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ, ಅವರ ಮಂತ್ರಿ ಮಂಡಲದಲ್ಲಿ (2012ರ ಮಾರ್ಚ್ನಲ್ಲಿದ್ದ 48 ಮಂದಿ) 10 ಮುಸ್ಲಿಮರು ಮತ್ತು 9 ಯಾದವರಿದ್ದರು. ಇದಕ್ಕೆ ಹೋಲಿಸಿದರೆ, ಯೋಗಿ ಮಂತ್ರಿ ಮಂಡಲದಲ್ಲಿ ಕೇವಲ ಒಬ್ಬರೇ ಯಾದವ್ ಮತ್ತು ಒಬ್ಬರೇ ಮುಸ್ಲಿಂ ಇದ್ದಾರೆ.
ಮುಖ್ಯವಾದ 2027ರ ವಿಧಾನಸಭಾ ಚುನಾವಣೆ ವೇಗವಾಗಿ ಹತ್ತಿರವಾಗುತ್ತಿರುವಾಗ, ಬಿಜೆಪಿಯ ಇತ್ತೀಚಿನ ಕ್ರಮಗಳು ಪಕ್ಷವು ತಮ್ಮ ದೌರ್ಬಲ್ಯವನ್ನು ಗುರುತಿಸಿದೆ ಎಂಬುದನ್ನು ತೋರಿಸುತ್ತವೆ. ಇಂದು ಪಕ್ಷವು ಒಬಿಸಿ ಮತ್ತು ದಲಿತ ಮತಗಳ ಮೇಲೆ ಹಾಗೂ ತನ್ನ ಸಣ್ಣ ಒಬಿಸಿ ಮಿತ್ರಪಕ್ಷಗಳ ಬೆಂಬಲದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದನ್ನು ಸೂಚಿಸುತ್ತದೆ. ಯುಪಿಯಲ್ಲಿ ಅಧಿಕಾರದ ಕೀಲಿ ಕೈ ಜಾತಿ ಲೆಕ್ಕಾಚಾರದಲ್ಲೇ ಉಳಿದಿದೆ ಮತ್ತು ಚುನಾವಣೆಗೆ ಕೆಲವು ತಿಂಗಳುಗಳ ಮುಂಚಿತವಾಗಿ ಸಂಪುಟ ವಿಸ್ತರಿಸುವ ಬಿಜೆಪಿಯ ನಿರ್ಧಾರವು ಅದರ ರಾಜಕೀಯ ಅಭದ್ರತೆ ಮತ್ತು ಚುನಾವಣಾ ದೌರ್ಬಲ್ಯಗಳನ್ನು ಪ್ರತಿಫಲಿಸುತ್ತದೆ.
ಆದಾಗ್ಯೂ, ಮೋದಿ ಸರ್ಕಾರವು ಎಸ್ಐಆರ್ ಎಂಬ ಪೆಡಂಭೂತವನ್ನು ದೇಶದಾದ್ಯಂತ ಅಸ್ತಿತ್ವಕ್ಕೆ ತಂದಿದೆ. ಉತ್ತರ ಪ್ರದೇಶದಲ್ಲಿ ನಡೆದ ಎಸ್ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಒಟ್ಟು 15.44 ಕೋಟಿ ಮತದಾರರಲ್ಲಿ ಬರೋಬ್ಬರಿ 2.05 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಿದೆ. ಇವರಲ್ಲಿ ಹೆಚ್ಚಿನವರು ಇದೇ ಒಬಿಸಿ, ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯವರೇ ಆಗಿದ್ದಾರೆ. ಬೃಹತ್ ಸಂಖ್ಯೆಯ ಮತದಾರರನ್ನು ಹೊರಗಿಟ್ಟು ಮತ್ತು ಜಾತಿ ಸಮೀಕರಣವನ್ನು ಬಳಸಿ ಚುನಾವಣೆ ಗೆಲ್ಲುವುದು ಮೋದಿ-ಯೋಗಿ ತಂತ್ರ-ಕುತಂತ್ರವಾಗಿ ಕಾಣುತ್ತಿದೆ.



