ಬಹು ನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಧ್ಯ ಕರ್ನಾಟಕದ ವಿದ್ಯಾನಗರಿ, ಜ್ಞಾನ ನಗರಿ, ವಿದ್ಯಾಕಾಶಿ ಎಂದೇ ಹೆಸರಾಗಿರುವ ದಾವಣಗೆರೆ ಜಿಲ್ಲೆಗೆ 21ನೇ ಸ್ಥಾನ ದೊರೆತಿದ್ದು, ಶೇ.66.09 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾಮೂಲಿಯಂತೆ ಬಾಲಕಿಯರೇ ಮುಂದಿದ್ದಾರೆ. ಜಿಲ್ಲೆಗೆ ಯಾವುದೇ ರ್ಯಾಂಕ್ ದೊರೆಯದಿರುವುದು ಶಿಕ್ಷಣ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದ 19,970 ವಿದ್ಯಾರ್ಥಿಗಳಲ್ಲಿ 13196 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 7,925 ಮಂದಿ ಬಾಲಕಿಯರು 5,271 ಮಂದಿ ಬಾಲಕರು ತೇರ್ಗಡೆ ಹೊಂದಿದ್ದಾರೆ.
ದಾವಣಗೆರೆ ನಗರದ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಯಶಸ್ವಿನಿ ಕೆ ಪಿ 623 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದು, ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿನಿ ಐಜಾ ಫಾತಿಮಾ 622 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಿದ್ದಗಂಗಾ ಶಾಲೆಯ ಯಶಸ್ವಿನಿ ಈಡಿಗೇರ 625ಕ್ಕೆ 622, ಕೀರ್ತಿ 622, ಸುಶ್ಮಿತಾ 622 ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ಚನ್ನಗಿರಿ ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 3,464 ವಿದ್ಯಾರ್ಥಿಗಳಲ್ಲಿ 916 ಮಂದಿ ಬಾಲಕರು, 1,449 ಮಂದಿ ಬಾಲಕಿಯರು ಸೇರಿದಂತೆ 2,365 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.68.27 ಫಲಿತಾಂಶ ಲಭಿಸಿದೆ. ದಾವಣಗೆರೆ ದಕ್ಷಿಣ ತಾಲೂಕಿನಲ್ಲಿ 5182 ವಿದ್ಯಾರ್ಥಿಗಳಲ್ಲಿ 1510 ಬಾಲಕರು, 2118 ಬಾಲಕಿಯರು ಸೇರಿ 3628 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.70.01 ಫಲಿತಾಂಶ ಪಡೆದಿದೆ. ದಾವಣಗೆರೆ ಉತ್ತರ ತಾಲೂಕಿನಲ್ಲಿ 3370 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 884 ಬಾಲಕರು, 1195 ಬಾಲಕಿಯರು ಸೇರಿ 2079 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.61.79 ಫಲಿತಾಂಶ ದೊರೆತಿದೆ. ಹರಿಹರ ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ 3009 ವಿದ್ಯಾರ್ಥಿಗಳ ಪೈಕಿ 701 ಬಾಲಕರು, 1128 ಬಾಲಕಿಯರು ಒಳಗೊಂಡು 1829 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.60.78 ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಕೊನೆ ಸ್ಥಾನದಲ್ಲಿದೆ.
ಹೊನ್ನಾಳಿಯಲ್ಲಿ ಪರೀಕ್ಷೆಗೆ ಹಾಜರಾದ 2706 ವಿದ್ಯಾರ್ಥಿಗಳಲ್ಲಿ 691 ಬಾಲಕರು, 1156 ಬಾಲಕಿಯರು ಸೇರಿದಂತೆ ಒಟ್ಟು 1847 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು ಶೇ.68.26 ಫಲಿತಾಂಶ ಸಿಕ್ಕಿದೆ. ಜಗಳೂರು ತಾಲೂಕಿನ ಪರೀಕ್ಷೆಗೆ ಹಾಜರಾದ 2239 ವಿದ್ಯಾರ್ಥಿಗಳ ಪೈಕಿ 569 ಬಾಲಕರು, 879 ಬಾಲಕಿಯರು ಸೇರಿ 1448 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.64.67 ಫಲಿತಾಂಶ ಲಭಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ದಾವಣಗೆರೆ ದಕ್ಷಿಣ ತಾಲೂಕು ಮೊದಲ ಸ್ಥಾನದಲ್ಲಿದೆ.
ದಾವಣಗೆರೆ ಜಿಲ್ಲೆಯ ಮೂರು ಪ್ರೌಢಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ, ಹೊಯ್ಸಳ ಪ್ರೌಢಶಾಲೆ, ಸರ್ವಮಂಗಳಮ್ಮ ಮಾಗನೂರು ಬಸಪ್ಪ ಪ್ರೌಢಶಾಲೆಗಳಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಉತ್ತೀರ್ಣದ ಫಲಿತಾಂಶ ದೊರೆತಿಲ್ಲ.
ಇದನ್ನೂ ಓದಿದ್ದೀರಾ? ಎಟಿಎಂ ಶುಲ್ಕ ಹೆಚ್ಚಳದಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಅವಧಿ ಇಳಿಕೆವರೆಗೆ: ಆರ್ಥಿಕ ಬದಲಾವಣೆಗಳ ಪರಿಣಾಮಗಳೇನು?
ಜಿಲ್ಲೆಯಲ್ಲಿ ಅತ್ಯುತ್ತಮ ಶ್ರೇಣಿ ಎ+ 1055 ವಿದ್ಯಾರ್ಥಿಗಳು, ಉತ್ತಮ ಶ್ರೇಣಿ ಎ 2398 ವಿದ್ಯಾರ್ಥಿಗಳು, ಪ್ರಥಮ ದರ್ಜೆ ಬಿ+ 2995 ವಿದ್ಯಾರ್ಥಿಗಳು, ಬಿ ಶ್ರೇಣಿ 3320 ವಿದ್ಯಾರ್ಥಿಗಳು, ಸಿ+ ಶ್ರೇಣಿಯಲ್ಲಿ 2880 ವಿದ್ಯಾರ್ಥಿಗಳು, ಸಿ ಶ್ರೇಣಿಯಲ್ಲಿ 548 ವಿದ್ಯಾರ್ಥಿಗಳು ಫಲಿತಾಂಶ ಪಡೆದಿದ್ದಾರೆ.
ಒಟ್ಟಾರೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.74.28 ಫಲಿತಾಂಶ ಗಳಿಸಿ 23ನೇ ಸ್ಥಾನದಲ್ಲಿದ್ದ ದಾವಣಗೆರೆ ಜಿಲ್ಲೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶೇ.66.08 ಫಲಿತಾಂಶದೊಂದಿಗೆ 21ನೇ ಸ್ಥಾನಕ್ಕೇರಿದೆ. ಸ್ಥಾನದಲ್ಲಿ ಏರಿಕೆ ಕಂಡರೂ ಫಲಿತಾಂಶ ಶೇ.8ರಷ್ಟು ಇಳಿಕೆ ಕಂಡಿದೆ.
