ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆ 31ನೇ ಸ್ಥಾನದಲ್ಲಿದೆ.
ಕಳೆದ ವರ್ಷ 33ನೇ ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ ಈ ಬಾರಿ 31ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಜಿಲ್ಲೆಯ ಒಟ್ಟು ಫಲಿತಾಂಶ ಶೇ ಶೇ53.25ರಷ್ಟು ದಾಖಲಾಗಿದೆ.
ಈ ಬಾರಿ ಪರೀಕ್ಷೆಗೆ ಒಟ್ಟು 24,187 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 12,651 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಜಿಲ್ಲೆಗೆ ಒಟ್ಟು ಶೇ 53.25 ಫಲಿತಾಂಶ ಬಂದಿದೆ.
2022-23ನೇ ಸಾಲಿನಲ್ಲಿ ಜಿಲ್ಲೆ 34ನೇ ಸ್ಥಾನದಲ್ಲಿತ್ತು. ಕಳೆದ ವರ್ಷ ಒಂದು ಸ್ಥಾನ ಜಿಗಿತ ಕಂಡಿತ್ತು. ಪ್ರಸಕ್ತ ಸಾಲಿನಲ್ಲಿ ಫಲಿತಾಂಶ ಕುಸಿದರೂ ಎರಡು ಸ್ಥಾನ ಮೇಲಕ್ಕೇರಿದೆ.
ತಾಲ್ಲೂಕುವಾರು ಫಲಿತಾಂಶ :
ಔರಾದ್ ತಾಲ್ಲೂಕಿನಲ್ಲಿ ಒಟ್ಟು 3,042 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 1,659 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. ಒಟ್ಟು ಶೇ 54.54 ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಔರಾದ್ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಬಸವಕಲ್ಯಾಣದಲ್ಲಿ 4,844 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 2,436 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 50.29ರಷ್ಟು ಫಲಿತಾಂಶ ಬಂದಿದೆ.
ಭಾಲ್ಕಿ ತಾಲ್ಲೂಕಿನಲ್ಲಿ ಒಟ್ಟು 3,880 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 2,308 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು ಶೇ 59.48ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆಯ ಫಲಿತಾಂಶದಲ್ಲಿ ಭಾಲ್ಕಿ ಪ್ರಥಮ ಸ್ಥಾನದಲ್ಲಿದೆ.
ಬೀದರ್ ತಾಲ್ಲೂಕಿನಲ್ಲಿ ಅತೀ ಹೆಚ್ಚು 6,881 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 3,641 ವಿದ್ಯಾರ್ಥಿಗಳು ಉತೀರ್ಣರಾದರು. ಒಟ್ಟು 52.91 ರಷ್ಟು ಫಲಿತಾಂಶ ದಾಖಲಾಗಿದೆ. ಹುಮನಾಬಾದ್ ತಾಲ್ಲೂಕಿನಲ್ಲಿ 5,540 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 2,607 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟು 47.06 ಫಲಿತಾಂಶ ಬಂದಿದ್ದು, ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ನಗರ ಪ್ರದೇಶದಲ್ಲಿ 10,159 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು, ಈ ಪೈಕಿ 5,541 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ಶೇ 54.54ರಷ್ಟು ನಗರ ಪ್ರದೇಶದ ಫಲಿತಾಂಶ ಬಂದಿದೆ. ಒಟ್ಟು ಶೇ 50.68ರಷ್ಟು ಗ್ರಾಮೀಣ ಭಾಗದ ಫಲಿತಾಂಶ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಒಟ್ಟು 14,028 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು, ಅವರಲ್ಲಿ 7,110 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರಾಸರಿ ಅರ್ಧದಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಒಟ್ಟಾರೆ ಫಲಿತಾಂಶ ಶೇ 50ಕ್ಕಿಂತ ಕಡಿಮೆ ಇದೆ, ಅನುದಾನ ರಹಿತ ಶಾಲೆಗಳ ಫಲಿತಾಂಶ 62.78ರಷ್ಟು ಬಂದಿದೆ.
ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳ ವಿವರ :
ಭಾಲ್ಕಿ ಪಟ್ಟಣದ ಎಸ್‌ಡಿಎ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಜಾ ಪಾಟೀಲ್ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಟಾಪರ್ ಆಗಿದ್ದು, ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಭಾಲ್ಕಿಯ ಶ್ರೀ ಸತ್ಯ ಸಾಯಿ ಪ್ರೌಢ ಶಾಲೆ ವಿದ್ಯಾರ್ಥಿ ದೇವ, ಭಾಲ್ಕಿಯ ವಿದ್ಯಾಭಾರತಿ ಶಾಲೆ ವಿದ್ಯಾರ್ಥಿನಿ ಸೃಷ್ಟಿ ಹಾಗೂ ಭಾಲ್ಕಿಯ ಸರ್ವೋದಯ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ದೇವಿ 625ಕ್ಕೆ 621 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇನ್ನು ಬೀದರ್ ತಾಲ್ಲೂಕಿನ ಬಗದಲ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರವಾಲಿಕಾ ರೆಡ್ಡಿ, ಔರಾದ್ ತಾಲ್ಲೂಕಿನ ಸಂತಪೂರ ಜ್ಞಾನ ಭಾರತಿ ಪ್ರೌಢ ಶಾಲೆ ಆದರ್ಶ ವಿಠ್ಠಲರಾವ್, ಬಸವಕಲ್ಯಾಣ ತಾಲ್ಲೂಕಿನ ರಾಜೋಳ ಆದರ್ಶ ವಿದ್ಯಾಲಯದ ಶ್ರೇಯಾ ಹಾಗೂ ಭಾಲ್ಕಿ ತಾಲ್ಲೂಕಿನ ವಿದ್ಯಾಭಾರತಿ ಪ್ರೌಢ ಶಾಲೆಯ ಪ್ರತಿಕ್ಷಾ 625ಕ್ಕೆ 620 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಸಾಧನೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿ | ಕೆಂದ್ರ ಸರ್ಕಾರ ನೀಡುವ ₹500 ಕೋಟಿ ಯಾವುದಕ್ಕೂ ಸಾಲುವುದಿಲ್ಲ: ಸಚಿವ ಮಧು ಬಂಗಾರಪ್ಪ
ʼಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಓದಿನಲ್ಲಿ ಹಿಂದಿರುವ ಮಕ್ಕಳ ಬಗ್ಗೆ ಗಮನ ಹರಿಸಿ, ಅವರಿಗೆ ಹೆಚ್ಚುವರಿ ತರಗತಿಗಳನ್ನು ನಡೆಸಿ, ತರಬೇತಿ ನೀಡಲಾಗಿತ್ತು. ʼಮರು ಸಿಂಚನʼ ಕಾರ್ಯಕ್ರಮ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ‘ಕಲಿಕಾ ಆಸರೆ’ ಪುಸ್ತಕಗಳನ್ನು ಒದಗಿಸುವುದು ಸೇರಿದಂತೆ ಕಾರ್ಯಗಾರಗಳು ನಡೆಸಲಾಗಿತ್ತು. ಆದರೆ, ಒಟ್ಟಾರೆ ಫಲಿತಾಂಶ ನಿರೀಕ್ಷೆಯಂತೆ ಬರಲಿಲ್ಲ. ಶಿಕ್ಷಣ ಇಲಾಖೆಯು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲವಾಗುತ್ತಿದೆ. ಈಚೆಗೆ ಬಂದ ಪಿಯು ಫಲಿತಾಂಶವು ಭಾರಿ ಕುಸಿತ ಕಂಡಿದೆ. ಈಗ ಎಸ್ಸೆಸ್ಸೆಲ್ಸಿಯಲ್ಲಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಫಲಿತಾಂಶ ಕಾಣುತ್ತಿಲ್ಲʼ ಎಂದು ಶಿಕ್ಷಣ ಪ್ರೇಮಿಗಳು ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಸಮಗ್ರ ಮಾಹಿತಿಗಾಗಿ ಧನ್ಯವಾದಗಳು, 🙏🙏