ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿರುವುದಾಗಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ ಕೆ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಮುರುಡೇಶ್ವರ ದೇವಸ್ಥಾನದ ಬಳಿ ಹಿರಾಲಾಲ್ ಸನ್ ಎಂಬುವರ ಮೇಲೆ ಇಬ್ವರು ಕಿಡಿಗೇಡಿಗಳು ಹಲ್ಲೆ ನಡೆಸಿ ಚಾಕು ಇರಿದಿದ್ದ ಘಟನೆಗೆ ಸಂಬಂಧಿಸಿದಂತೆ ಎಸ್‌ಪಿ ಮಿಥುನ್ ಕುಮಾರ್ ಜಿ ಕೆ ಸುದ್ದಿಗೋಷ್ಠಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
“ಶಿವಮೊಗ್ಗ ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಮುರುಡೇಶ್ವರ ದೇವಸ್ಥಾನದ ಬಳಿ ಬುಧವಾರ ಸಂಜೆ 6ರ ಸುಮಾರಿಗೆ ನಾಲ್ವರು, ಕಚೋರಿ ಮಾರುವ ಅಂಗಡಿಗೆ ಬಂದಿದ್ದರು. ಕಚೋರಿ ಅಂಗಡಿಗೆ ಬಂದವರು ಅವರ ಬಳಿ ಹತ್ತಿರದಲ್ಲಿರುವ ಕುಕ್ಕರ್ ಅಂಗಡಿಯ ವಿಳಾಸ ಕೇಳಿದ್ದರು. ಕುಕ್ಕರ್ ಅಂಗಡಿ ಬಾಗಿಲು ಹಾಕಿದ್ದಕ್ಕೆ ನಮಗೆ ತಪ್ಪು ವಿಳಾಸ ಹೇಳುತ್ತೀಯಾ ಎಂದು ಗಲಾಟೆ ಮಾಡಿದ್ದರು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರ ? ಬೀದರ್ ಎಟಿಎಂ ದರೋಡೆ ಪ್ರಕರಣ : ಹೈದರಾಬಾದ್‌ನಲ್ಲಿ ಮತ್ತೆ ಗುಂಡಿನ ದಾಳಿ
“ಘಟನೆಯನ್ನು ಖಂಡಿಸಿ ಜೈನ ಸಮುದಾಯದ ವ್ಯಾಪಾರಸ್ಥರು ಮನವಿ ಮಾಡಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮದನ್ ಯಾನೆ ಮಂಜುನಾಥ್(35) ಎಂಬಾತನನ್ನು ಬಂಧಿಸಲಾಗಿದೆ. ಉಳಿದ ಮೂವರ ಪತ್ತೆಗೆ ಕ್ರಮ ಜರುಗಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಇಂತಹ ಘಟನೆ ವೇಳೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು” ಎಂದು ಎಸ್‌ಪಿ ಮಿಥುನ್ ಕುಮಾರ್ ವರ್ತಕರಿಗೆ ತಿಳಿಸಿದ್ದಾರೆ.