ಬಡತನದಲ್ಲಿ ಬೆಳೆದರೂ ಉನ್ನತ ಶಿಕ್ಷಣ ಪಡೆಯುವ ಕನಸು ಕಂಡಿದ್ದ ಪ್ರತಿಭಾವಂತ ವಿದ್ಯಾರ್ಥಿನಿಗೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ನೆರವಿಗೆ ನಿಂತಿದ್ದಾರೆ. ಈ ಉದಾರ ಕಾರ್ಯದ ಮೂಲಕ ಪಂತ್ ಕ್ರೀಡಾಂಗಣದಾಚೆಗೆ ತಮ್ಮ ಮಾನವೀಯತೆ ಮೆರೆದಿದ್ದಾರೆ.
ಆಕೆ ಒಂದು ಬಡ ಕುಟುಂಬದ ವಿದ್ಯಾರ್ಥಿನಿ. ಉತ್ತಮ ಅಂಕಗಳನ್ನು ಪಡೆದರೂ ಆರ್ಥಿಕ ಅಸಾಧ್ಯತೆಯಿಂದಾಗಿ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಅಡಚಣೆ ಆಗಿತ್ತು. ತಂದೆಗೆ ಮಗಳನ್ನು ಕಾಲೇಜಿಗೆ ಸೇರಿಸಲು ಸಾಧ್ಯವಾಗುತ್ತಿಲ್ಲ ಎಂಬ ಸ್ಥಿತಿಯಲ್ಲಿದ್ದಾಗ, ರಿಷಬ್ ಆಕೆಯ ಆರ್ಥಿಕ ನೆರವಿಗೆ ನಿಂತರು.
ಹೀಗೆ ಬಡತನದ ಮಧ್ಯೆ ತನ್ನ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿನಿ ಜ್ಯೋತಿ ಕಣಬೂರ್. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಮಗಳು. ತಂದೆ ತೀರ್ಥಯ್ಯ ಹಾಗೂ ರೂಪಾ. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕ ಹೋಟೆಲ್ ಇರಿಸಿಕೊಂಡು 4 ಮಕ್ಕಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಈ ಮಧ್ಯೆ ಇಬ್ಬರು ಸಹೋದರರು ಹೊಲದಲ್ಲಿ ಕೂಲಿ ಮಾಡ್ತಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ | ಕ್ರೀಡೆ ಯುವಕರ ಜೀವನದ ಅವಿಭಾಜ್ಯ ಅಂಗವಾಗಬೇಕು: ಶರಬಬಸಪ್ಪ ಸಂಗಳದ
ಇನ್ನು ಕಣಬೂರ ಕುಟುಂಬದ ಕೊನೆಯ ಮಗಳಾಗಿರೋ ಜ್ಯೋತಿ ಹೊಲದಲ್ಲಿ ಕೆಲಸ ಮಾಡುತ್ತಲೇ ಬಂದ ಹಣದಿಂದ ಪಿಯುಸಿ ಶಿಕ್ಷಣ ಮುಗಿಸಿದ್ದಳು. ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.85 ಅಂಕಗಳೊಂದಿಗೆ ತೇರ್ಗಡೆಯಾದ ಜ್ಯೋತಿಗೆ ಮುಂದಿನ ವ್ಯಾಸಂಗಕ್ಕೆ ಹಣಕಾಸಿನ ತೊಂದರೆಯುಂಟಾಗಿತ್ತು. ಆಗ ತಂದೆ ತೀರ್ಥಯ್ಯ ಗ್ರಾಮದ ಅನಿಲ್ ಹುಣಸಿಕಟ್ಟಿ ಅವರ ಬಳಿ ಹೇಳಿದಾಗ, ಇವರ ಸಮಸ್ಯೆ ಕೇಳಿದ ಅನಿಲ್ ನೇರವಾಗಿ ಬೆಂಗಳೂರಿನ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುವ ತಮ್ಮ ಸ್ನೇಹಿತರ ಮೂಲಕ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಸಂಪರ್ಕಿಸಿದ್ದಾರೆ. ಆಗ ಜ್ಯೋತಿಯ ಸಮಸ್ಯೆ ಕೇಳಿ ತಕ್ಷಣ ರಿಷಬ್ ಪಂತ್ ಆಕೆಯ ಮೊದಲ ವರ್ಷದ ಬಿಸಿಎ ತರಗತಿಗೆ ಅಗತ್ಯವಿರುವ 40 ಸಾವಿರ ಹಣ ನೆರವು ನೀಡಿದ್ದಾರೆ. ಕ್ರಿಕೆಟಿಗ ರಿಷಬ್ ನೆರವಿನ ಹಿನ್ನೆಲೆ ಬಿಎಲ್ ಡಿ ಸಂಸ್ಥೆಯಿಂದ ಅಭಿನಂದನಾ ಪತ್ರ ಬರೆಯಲಾಗಿದೆ. ರಿಷಬ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.