ಕರ್ನಾಟಕ ಪಂಚಶೀಲ ಕಲಾ, ಸಾಹಿತ್ಯ ಪರಿಷತ್ ವತಿಯಿಂದ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ಭೀಮ ಗೀತೆಗಳ ಭಜನೆ ಸಂಗೀತ ಸ್ಪರ್ಧೆಯಲ್ಲಿ ಭಾಲ್ಕಿ ತಾಲ್ಲೂಕಿನ ಅಟ್ಟರಗಾ ಗ್ರಾಮದ ಭೀಮಶಾಹಿರ ಕಾಳಿದಾಸ ಯುವಕ ಸಂಘದ ತಂಡ ಪ್ರಥಮ ಸ್ಥಾನ ಗಳಿಸಿತು.
ರಾಜ್ಯದ ವಿವಿಧ ಜಿಲ್ಲೆಗಳ 27 ಭಜನೆ ತಂಡಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ₹21 ಸಾವಿರ ನಗದು ಬಹುಮಾನಕ್ಕೆ ಪಾತ್ರವಾಯಿತು. ವಿಜಯಪುರ ಜಿಲ್ಲೆಯ ಬಾಗೆವಾಡಿಯ ಸೋಮೇಶ್ವರ ಭಜನೆ ತಂಡ ದ್ವಿತೀಯ ಸ್ಥಾನದೊಂದಿಗೆ ₹10 ಸಾವಿರ, ಬಸವಕಲ್ಯಾಣ ತಾಲ್ಲೂಕಿನ ಗುತ್ತಿಯ ಜೈಭೀಮ ಕಲಾ ಪಥ ತಂಡ ತೃತೀಯ ಸ್ಥಾನದೊಂದಿಗೆ ₹5 ಸಾವಿರ ಬಹುಮಾನ ಪಡೆದುಕೊಂಡಿತು.
ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿದ ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ʼದೇಶದಲ್ಲಿ ಪ್ರಜೆಗಳು ಶಾಂತಿ, ನೆಮ್ಮದಿ ಬದುಕಿಗೆ ಬುದ್ಧನ ತತ್ವಗಳು ಬೇಕು. ಶರಣರ ತತ್ವ, ಅಂಬೇಡ್ಕರ ಚಿಂತನೆಗಳು ಪ್ರಸಾರ ಮಾಡಬೇಕಿದೆʼ ಎಂದರು.
ಪ್ರೊ.ಬಸವರಾಜ ಮಯೂರ್ ಮಾತನಾಡಿ, ʼಮನಷ್ಯರೆಲ್ಲರೂ ಒಂದೇ ಎನ್ನುವ ಸಮಾಜ ಜಾತಿ ಸ್ತರ ವಿನ್ಯಾಸದಿಂದ ಮನಸ್ಸಿನಿಂದ ಇಂದು ಸಹ ಪ್ರತಿನಿತ್ಯ ಶೋಷಣೆಗಳು ನಡೆಯುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯರಿಗೆ ಪ್ರಜಾಪ್ರಭುತ್ವದ ದೀಕ್ಷೆ ನೀಡಿ, ಸರ್ವರು ಸಮಾನರು,ಸಮಾನ ರಕ್ಷಣೆ, ಪ್ರಗತಿಯಾಗುವ ಹಕ್ಕು ನೀಡಿದ್ದಾರೆ. ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆಯಾಗಿದೆʼ ಎಂದರು.
ಕಲಾವಿದ ಶಂಭುಲಿಂಗ ವಾಲೊಡ್ಡಿ, ರಾಮಚಂದ್ರ ಕರ್ಮವೀರ, ಬಸವರಾಜ ಉಜ್ವಲೆ ತೀರ್ಪುಗಾರರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼವಚನ ದರ್ಶನʼ ಕೃತಿಯಿಂದ ವಚನ ಸಾಹಿತ್ಯ ನಿರ್ನಾಮಕ್ಕೆ ಯತ್ನ : ಆರ್.ಕೆ.ಹುಡಗಿ
ಕಾರ್ಯಕ್ರಮದಲ್ಲಿ ಡಾ. ಜ್ಞಾನಸಾಗರ ಭಂತೆ ಶ್ರೀಶರಣ ಪಂಚಶೀಲ ಬೋಧಿಸಿದರು. ಲಕ್ಷ್ಮಣರಾವ್ ಕಾಂಚೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಮುಖರಾದ ಜೈಕುಮಾರ ಸಿಂಧೆ, ವೀರಶೆಟ್ಟಿ ಗುಮತಾಪುರ, ಅರ್ಜುನ ಕಾಂಚೆ, ರಮೇಶ ಡಾಕುಳಗಿ, ವಿಶ್ವನಾಥ ದೀನೆ, ರುದ್ರಯ್ಯ ಆರ್., ಪ್ರಶಾಂತ ದೊಡ್ಡಿ, ಪಂಢರಿ ಪೂಜಾರಿ, ಬಿ.. ಕೃಷ್ಣಪ್ಪ, ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ವಿಜಯಕುಮಾರ ಸೋನಾರೆ, ಅಂಬಾದಾಸ ಗಾಯಕವಾಡ್ ಪಾಲ್ಗೊಂಡಿದ್ದರು.