ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಬೀದರ ನಗರದಲ್ಲಿ ರಾಜ್ಯಮಟ್ಟದ ಜಾನಪದ ಜಾತ್ರೆಯನ್ನು ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ʼರಾಜ್ಯದ ಗ್ರಾಮೀಣ ಜಾನಪದ ಕಲೆ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಜಾನಪದ ಜಾತ್ರೆಯನ್ನು ಬೀದರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದುʼ ಎಂದರು.
ʼಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಹೊರ ಜಿಲ್ಲೆಯ ಕಲಾವಿದರು ಈ ಜಾನಪದ ಜಾತ್ರೆಯಲ್ಲಿ ಪಾಲ್ಗೊಂಡು ವಿವಿಧ ಸಾಂಸ್ಕೃತಿಕ ರಸದೌತಣವನ್ನು ಉಣಬಡಿಸಲಿದ್ದಾರೆ. ಜಾತ್ರೆಯ ಒಂದು ದಿನ ಮುಂಚೆ ಕಾರ್ಯಕ್ರಮದ ಜಾಗೃತಿಗಾಗಿ ಸಾವಿರಾರು ವಿದ್ಯಾರ್ಥಿಗಳಿಂದ, ಸಂಘ-ಸಂಸ್ಥೆಗಳಿಂದ ವಾಕಾಥಾನ್ ಹಮ್ಮಿಕೊಳ್ಳಲಾಗುವುದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಮುಖ್ಯ ವೃತ್ತಗಳಲ್ಲಿ ಪ್ರಚಾರ ಹಮ್ಮಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ವಿವಿಧ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸುವುದು. ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇನ್ನೊಂದು ಸಭೆ ನಡೆಸಲಾಗುವುದುʼ ಎಂದು ತಿಳಿಸಿದರು.
ದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, ʼಬೇರೆ ಜಿಲ್ಲೆಗಳಿಂದ ಬರುವ ಕಲಾವಿದರಿಗೆ ಸೂಕ್ತ ವಾಸ್ತವ್ಯ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ನಿಯಮಾನುಸಾರ ಸಂಭಾವನೆ ಹಾಗೂ ಪ್ರಯಾಣ ವೆಚ್ಚ ನೀಡಲಾಗುವುದು. ಜಾನಪದ ಜಾತ್ರೆಯಲ್ಲಿ ಬೆಳಿಗ್ಗೆ ನಗರದಾದ್ಯಂತ ಸಾವಿರಾರು ಕಲಾವಿದರಿಂದ ಮೆರವಣಿಗೆ ಜರುಗಲಿದ್ದು, ಕವಿಗೋಷ್ಠಿ, ಸಂಗೀತ ಕಾರ್ಯಕ್ರಮಗಳು, ನಾಟಕ ಹಾಗೂ ವಿವಿಧ ರೀತಿಯ ಕಲಾ ಪ್ರಕಾರಗಳು, ನೃತ್ಯ ಪ್ರದರ್ಶನಗೊಳ್ಳಲಿವೆʼ ಎಂದರು.
ʼವಿವಿಧ ಇಲಾಖೆಗಳಿಂದ ಮಳಿಗೆಗಳನ್ನು ಹಾಕುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಸ್ಥಳೀಯವಾಗಿ ಲಭ್ಯವಿರುವ ಕಲಾ ಪರಿಕರಗಳನ್ನು ಕಾಸ್ಟ್ ಕಲಾಕೃತಿ, ಬಿದರಿ ಕಲೆ, ಲಂಬಾಣಿ ಉಡುಪು, ಚಿತ್ರಸಂತೆ, ಪುಸ್ತಕ ಮಳಿಗೆ ಮುಂತಾದವುಗಳನ್ನು ಸಹ ಹಮ್ಮಿಕೊಳ್ಳಲಾಗುವುದುʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ದಾಪ್ಯ ವೇತನ ಬಾರದೆ ವೃದ್ಧ ದಂಪತಿ ಪರದಾಟ; ಕಣ್ಣು ಹಾಯಿಸುವರೇ ಅಧಿಕಾರಿಗಳು?
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಪ್ರೊ. ಜಗನ್ನಾಥ ಹೆಬ್ಬಾಳೆ, ಎಂ.ಎಸ್.ಮನೋಹರ ಭಾರತಿ ವಸ್ತ್ರದ, ಪಾರ್ವತಿ ಸೋನಾರೆ, ದಿಲೀಪ ಕಾಡವಾದ, ಶಂಭುಲಿಂಗ ವಾಲ್ದೊಡ್ಡಿ, ದೇವಿದಾಸ ಚಿಮಕೋಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಸಭೆಗೆ ಜಾನಪದ ಜಾತ್ರೆ ಯಶಸ್ವಿಯಾಗುವ ನಿಟ್ಟಿನಲ್ಲಿ ಸಲಹೆ ನೀಡಿದರು.