ಆಧುನಿಕತೆಗೆ ತಕ್ಕಂತೆ ಸಕಲವೂ ಕಂಪ್ಯೂಟರ್ ಮಯವಾಗಿದೆ. ಸಾಧ್ಯವಾದಷ್ಟು ಕಂಪ್ಯೂಟರ್ ಬಳಕೆಯಿಂದ ದೂರವಿದ್ದು ದೃಷ್ಟಿ ಉಳಿಸಿಕೊಳ್ಳಬೇಕಿದೆ. ಪ್ರತಿ 20 ನಿಮಿಷಕ್ಕೊಮ್ಮೆ ಕಂಪ್ಯೂಟರ್ ಪರದೆಯಿಂದ ಬೇರೆಡೆ ದೃಷ್ಟಿ ಹಾಯಿಸಿ ನಿಮ್ಮ ಕಣ್ಣುಗಳನ್ನು ಉಳಿಸಿಕೊಳ್ಳಬೇಕು ಎಂದು ನೇತ್ರಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಕುಮಾರಸ್ವಾಮಿ ಸಲಹೆ ನೀಡಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯ ನೇತ್ರ ವಿಭಾಗದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಆಶಾ ಕಿರಣ ದೃಷ್ಟಿ ಕೇಂದ್ರಕ್ಕೆ ಚಾಲನೆ ನೀಡಿ ಕಣ್ಣುಗಳು ಮನುಷ್ಯನ ಬದುಕಿನ ಪ್ರಮುಖ ಅಂಗವಾಗಿದೆ. ದೃಷ್ಟಿಹೀನತೆ ಶಾಪವಾಗುವ ಮುನ್ನ ನಿಯಮಿತವಾಗಿ ದೃಷ್ಟಿ ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು. ಸಕಾಲದಲ್ಲಿ ನೇತ್ರ ತಪಾಸಣೆ ಬಹುಮುಖ್ಯ ಎಂಬ ಅಂಶದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಕಣ್ಣಿನ ದೋಷಗಳ ಪಟ್ಟಿ ಮಾಡಿ ಆಯಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಅವಶ್ಯ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದು ವಿವರಿಸಿದರು.
ಶುಭ್ರ ಕೈಗಳಿಂದ ಕಣ್ಣನ್ನು ಮುಟ್ಟಬೇಕು. ಇಲ್ಲವಾದಲ್ಲಿ ಅನೇಕ ವೈರಸ್ ಗಳು ಕಣ್ಣು ಸೇರುವ ಮುನ್ನ ನಿಮ್ಮ ಕಣ್ಣಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕಣ್ಣಿನ ಸೋಂಕು, ವಿಟಮಿನ್ ಕೊರತೆ, ಅಪೌಷ್ಟಿಕತೆ, ಅಕ್ಷಿಪಟಲದ ಗಾಯ, ಅನುವಂಶಿ ನ್ಯೂನ್ಯತೆ ಹೀಗೆ ಅನೇಕ ರೀತಿಯಲ್ಲಿ ಕಣ್ಣಿಗೆ ಕಂಟಕ ಎದುರಾಗುತ್ತದೆ. ಇವೆಲ್ಲದರ ತಡೆಗಟ್ಟುವ ಹಾಗೂ ಕೂಡಲೇ ಚಿಕಿತ್ಸೆ ವ್ಯವಸ್ಥೆಗೆ ಕೇಂದ್ರದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂದ್ಯತೆ ನಿಯಂತ್ರಣಾ ಕಾರ್ಯಕ್ರಮ ಜೊತೆ ರಾಜ್ಯ ಸರ್ಕಾರ ಆಶಾ ಕಿರಣ ದೃಷ್ಟಿ ಕೇಂದ್ರ ಎಲ್ಲಡೆ ಏಕ ಕಾಲಕ್ಕೆ ತೆರೆದಿದೆ ಎಂದು ತಿಳಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ.ಕೇಶವರಾಜ್ ಮಾತನಾಡಿ ಕಣ್ಣಿನ ಮಹತ್ವ ಎಲ್ಲರಿಗೂ ತಿಳಿದಿದೆ. ಆದರೆ ನೇತ್ರ ಕಾಪಾಡಿಕೊಳ್ಳುವ ಬಗೆ ಮಾತ್ರ ಅರಿತಿಲ್ಲ. ಕಣ್ಣುಗಳ ರಕ್ಷಣೆಗೆ ಗ್ರಾಮೀಣ ಭಾಗದಲ್ಲಿ ಅವಶ್ಯ ಜಾಗೃತಿ ಮೂಡಬೇಕಿದೆ. ಈ ಕೆಲಸ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿದೆ. ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗೆ ಇಲಾಖೆ ಸಕಲ ವ್ಯವಸ್ಥೆ ಮಾಡಲಿದೆ. ಕೇಂದ್ರದ ಮೊದಲ ದಿನವೇ ನೂರಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ತಾಲ್ಲೂಕಿನ ಸಾರ್ವಜನಿಕರು ಈ ಕಣ್ಣಿನ ಕೇಂದ್ರದ ಉಪಯೋಗ ಪಡೆದುಕೊಳ್ಳಲು ಮನವಿ ಮಾಡಿದರು.
ನೇತ್ರ ವೈದ್ಯೆ ಡಾ. ಕುಸುಮಾ ಮಾತನಾಡಿ ಕಣ್ಣುಗಳ ರಕ್ಷಣೆಗೆ ಹೆಚ್ಚು ಹಸಿರು ತರಕಾರಿ ಹಾಗೂ ಹಳದಿ ಕೆಂಪು ಹಣ್ಣುಗಳ ಸೇವಿಸಬೇಕಿದೆ. ಸಕ್ಕರೆ ಕಾಯಿಲೆಯು ಉಲ್ಬಣಗೊಂಡಂತೆ ರೆಟಿನೋಪತಿ ಗ್ಲಾಕೋಮದಂತಹ ಮೂಕ ರೋಗಗಳು ಹೆಚ್ಚುತ್ತವೆ. ಈ ನಿಟ್ಟಿನಲ್ಲಿ ಕಣ್ಣಿನ ಬಗ್ಗೆ ಎಚ್ಚರಿಕೆ ವಹಿಸಿ ಪರೀಕ್ಷೆಗೆ ಒಳಗಾಗುವುದು ಸೂಕ್ತ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕಣ್ಣಿನ ಪರೀಕ್ಷೆಗೆ ಒಳಗಾದ ರೋಗಿಗಳಿಗೆ ಉಚಿತ ಕನ್ನಡಕ ವಿತರಿಸಲಾಯಿತು. ಹಾಗೂ ಆನ್ ಲೈನ್ ಮೂಲಕ ಏಕಕಾಲದಲ್ಲಿ ದೃಷ್ಟಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನೇತ್ರ ಪರೀಕ್ಷಕ ಆರ್.ವಿ.ಗೌಡ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಇದ್ದರು.