ಹಾಸ್ಟೆಲ್‌ನಲ್ಲಿದ್ದ ಹಿರಿಯ ವಿದ್ಯಾರ್ಥಿಯೋರ್ವ ಕಲ್ಲಿನಿಂದ ಜೋರಾಗಿ ಹೊಡೆದ ಹಿನ್ನೆಲೆ ಮತ್ತೊಬ್ಬ ವಿದ್ಯಾರ್ಥಿಯು ತನ್ನ ಕಣ್ಣನ್ನೇ ಕಳೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೈಯದ್ ಅರ್ಫಾನ್(13) ಕಣ್ಣು ಕಳೆದುಕೊಂಡಿರುವ 7ನೇ ತರಗತಿಯ ಬಾಲಕ. ಅರ್ಫಾನ್ ಚಿಂತಾಮಣಿ ತಾಲೂಕಿನ ಮಸ್ತೇನಹಳ್ಳಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆ.25ರ ಭಾನುವಾರದಂದು ಬೆಳಗ್ಗೆ ಶಾಲೆಯ ಆವರಣದಲ್ಲಿರುವ ಮರದ ಕೆಳಗೆ ಕುಳಿತಿದ್ದಾಗ, ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿ ತಮೀಮ್ ಎಂಬಾತ ಇದ್ದಕ್ಕಿದ್ದಂತೆ ಅರ್ಫಾನ್‌ಗೆ ಕಲ್ಲಿನಿಂದ ಹೊಡೆದಿದ್ದಾನೆ.
ಕಲ್ಲೇಟಿನಿಂದ ಅರ್ಫಾನ್ ಕಣ್ಣಿಗೆ ಗಂಭೀರ ಗಾಯವಾಗಿದ್ದ ಹಿನ್ನೆಲೆ ವಸತಿ ಶಾಲೆಯ ಶಿಕ್ಷಕರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ವೈದ್ಯರ ಸಲಹೆಯಂತೆ ವಿದ್ಯಾರ್ಥಿಯ ಪೋಷಕರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೆರಳಿದ್ದು, ಅರ್ಫಾನ್ ಕಣ್ಣಿಗೆ ಗಂಭೀರ ಗಾಯವಾಗಿರುವುದು ಗೊತ್ತಾಗಿದೆ. ವೈದ್ಯರು ಗಾಯಗೊಂಡಿದ್ದ ವಿದ್ಯಾರ್ಥಿಯ ಒಂದು ಕಣ್ಣನ್ನು ತೆಗೆದು ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಸರ್ವರಿಗೂ ಸಂವಿಧಾನ ಅಭಿಯಾನಕ್ಕೆ ಮಂಗ್ಳೂರು ವಿಜಯ ಚಾಲನೆ
ಘಟನೆ ಕುರಿತು ಅರ್ಫಾನ್ ದೊಡ್ಡಪ್ಪ ಜಮೀರ್ ಪಾಷಾ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.