ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರದ ಅನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ಹಾಗೂ ಕ್ರೀಡಾ ಕ್ಲಬ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ನಿವೃತ್ತ ಸೈನಿಕ ಹಾಗೂ ಗೋಣಿಕೊಪ್ಪಲು ಅಕ್ಷಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಕುದುಕುಳಿ ಕೆ. ಸೋಮಯ್ಯ ‘ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಆತ್ಮವಿಶ್ವಾಸ ಇಲ್ಲದವರು ಏನನ್ನು ಸಾಧಿಸಲಾರರು. ಯಾವುದರಲ್ಲಿಯೂ ಸಹ ಮುಂದೆ ಬರಲಾರರು ‘ ಎಂದು ಹೇಳಿದರು.
” ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗಳ ಆಧಾರ ಸ್ತಂಭಗಳು. ಊರಿನ ಆಭರಣದಂತಿರುವ ವಿದ್ಯಾ ಸಂಸ್ಥೆಗಳನ್ನು ಬೆಳೆಸುವುದು ಈ ಆಧಾರ ಸ್ತಂಭಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ನಾಳೆ ಎನ್ನುವ ಆಲಸ್ಯವನ್ನು ದೂರ ಮಾಡಿಕೊಂಡು ಅಂದಿನ ಕೆಲಸಗಳನ್ನು ಅಂದೆ ಮಾಡಿ ಮುಗಿಸಬೇಕು. ಸಮಯವನ್ನು ಯಾರು ಸರಿಯಾಗಿ ಬಳಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ” ಎಂದು ನುಡಿದರು.

ದೇಹದ ಹಾರ್ಮೋನ್ ಗಳು ಬದಲಾವಣೆಯಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪುವುದು ಸಹಜ. ಕೆಟ್ಟ ಅಭ್ಯಾಸ ರೂಡಿಸಿಕೊಂಡರೆ ಜೀವನ ಅಧೋಗತಿಗೆ ಹೋಗುತ್ತದೆ. ಹೀಗಾಗದಂತೆ ವಿದ್ಯಾರ್ಥಿಗಳು ಎಚ್ಚರವಹಿಸಿ ಒಳ್ಳೆಯದನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೋಣಿಕೊಪ್ಪಲಿನ ರಾಷ್ಟ್ರೀಯ ಕ್ರೀಡಾಪಟು ಪಡಿಕಲ್ ಕುಸುಮಾವತಿ ಮಾತನಾಡಿ ‘ ಸಣ್ಣ ವಯಸ್ಸಿನಲ್ಲಿ ಉನ್ನತವಾದದ್ದನ್ನು ಸಾಧಿಸಲು ಕನಸು ಕಾಣಬೇಕು. ಶ್ರಮದಿಂದ ಏನನ್ನಾದರೂ ಸಾಧಿಸಬಹುದು ಹೊರತು ಸೋಮಾರಿತನದಿಂದ ಅಲ್ಲ ‘ ಎಂದು ಹಿತವಚನ ಹೇಳಿದರು.
ಸಮಾಜ ಸೇವಕ ಪುಳಿಂಜನ ಪೂವಯ್ಯ ಮಾತನಾಡಿ ‘ ನಾವು ಒಳ್ಳೆಯದನ್ನು ಮಾಡಿದರೆ ನಮ್ಮ ಬದುಕು ಹಸನಾಗುತ್ತದೆ. ನಮ್ಮ ಮಕ್ಕಳಿಗೂ ಒಳ್ಳೆಯದಾಗುತ್ತದೆ. ಯಾವತ್ತು ಒಳ್ಳೆಯದನ್ನೇ ಚಿಂತಿಸಿ, ಒಳ್ಳೆಯದನ್ನೇ ಮಾಡಬೇಕು ‘ ಎಂದು ತಿಳುವಳಿಕೆ ಹೇಳಿದರು.
ರಂಗಭೂಮಿ ಕಲಾವಿದ ಭರಮಣ್ಣ ಬೆಟಗೇರಿ ಮಾತನಾಡಿ ‘ ಸತ್ಯಕ್ಕಾಗಿ ಬದುಕಿದ ಮತ್ತು ನ್ಯಾಯಕ್ಕಾಗಿ ಹೋರಾಡಿದ ತತ್ವಜ್ಞಾನಿ ಸಾಕ್ರಿಟಿಸಿನ ಬದುಕು ನಮಗೆಲ್ಲ ಆದರ್ಶವಾಗಬೇಕು. ಜೀವನ ಅಮೂಲ್ಯವಾದದು. ಅದನ್ನು ಸಾರ್ಥಕ ಪಡಿಸಿಕೊಳ್ಳುವತ್ತ ಶ್ರಮಿಸಬೇಕು. ನಮ್ಮ ಹೃದಯದಲ್ಲಿ ಒಳ್ಳೆಯದನ್ನೇ ತುಂಬಿಕೊಂಡರೆ ಕೆಟ್ಟದ್ದು ಯಾವತ್ತೂ ನುಸುಳಲಾರದು ‘ ಎಂದು ನುಡಿದರು.

ವಿದ್ಯಾರ್ಥಿ ಸಂಸತ್ತಿಗೆ ಆಯ್ಕೆಯಾದ ಮದನ್, ಶ್ರಾವ್ಯ, ನಿರಂಜನ್, ಸೂರ್ಯ, ಹರಿಪ್ರಸಾದ್, ಪುರುಷೋತ್ತಮ, ರವಿಕುಮಾರ್, ಮಾದೇಶ, ಪವನ್, ದೀಕ್ಷಿತ, ಪ್ರಕೃತಿ, ಹರ್ಷಿತಾ, ಅರ್ಚನಾ, ಯಶವಂತ ಅವರಿಗೆ ಪ್ರಾಂಶುಪಾಲ ಅಭಿಜಿತ್ ಪ್ರತಿಜ್ಞಾವಿಧಿ ಭೋದಿಸಿದರು. ಕ್ರೀಡಾ ಕ್ಲಬ್ಬಿಗೆ ಆಯ್ಕೆಯಾದ ಸಂದೇಶ, ಪುರುಷೋತ್ತಮ, ಎಂ . ಎಸ್. ವರಲಕ್ಷ್ಮಿ, ಮಂಗಳ, ಅರ್ಚನ, ಎಂ. ಪಿ. ಯಶವಂತ ಅವರಿಗೆ ಉಪ ಪ್ರಾಂಶುಪಾಲ ಶಿವನಂಜು ಪ್ರಮಾಣ ವಚನ ಬೋಧಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಶೀಘ್ರ ಚಾಲನೆ : ಸಚಿವ ಕೃಷ್ಣ ಬೈರೇಗೌಡ
ಮಾನವ ಟ್ರಸ್ಟ್ ಅಧ್ಯಕ್ಷ ಅಪ್ಪಣ್ಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸಣ್ಣ ಸ್ವಾಮಿ ಗೌಡ, ಶಿವಣ್ಣ ಕರಡಿಪುರ, ವಿದ್ಯಾರ್ಥಿ ಪೋಷಕರಾದ ಗೋವಿಂದೇಗೌಡ, ಕೃಷ್ಣಸ್ವಾಮಿ, ಕಾಲೇಜಿನ ಕಾರ್ಯದರ್ಶಿ ಡಾ. ಜೆ. ಸೋಮಣ್ಣ, ಟ್ರಸ್ಟಿಗಳಾದ ಟಿ. ಆರ್. ಶಕುಂತಲಾ, ಟಿ . ಆರ್. ಸತೀಶ್ ಕುಮಾರ್, ಉಪನ್ಯಾಸಕರಾದ ಬಸವರಾಜು, ಅರ್ಪಿತ, ಸುಧಾ, ನವೀನ್ ಕುಮಾರ್, ವಿದ್ಯಾರ್ಥಿ ನಾಯಕರದ ಶ್ರಾವ್ಯ, ಅರ್ಚನ ಸೇರಿದಂತೆ ಇನ್ನಿತರರು ಇದ್ದರು.