ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಮೃತದೇಹ ಹಾಸ್ಟೆಲ್‌ನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಉದಯಗಿರಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ವಿದ್ಯಾರ್ಥಿ ವಿಕಾಸ್ ಮೃತ ದುರ್ದೈವಿ. ಆತನ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಬೆಳಗುಲಿ ಗ್ರಾಮದ ವಿಕಾಸ್, ಗುರುವಾರ ಕಾಲೇಜಿಗೆ ತೆರಳಿದ್ದವ, ಒಬ್ಬಲೇ ಹಾಸ್ಟೆಲ್‌ಗೆ ಮರಳಿ ಬಂದಿದ್ದ. ಸ್ನೆಹಿತರು ಹಾಸ್ಟೆಲ್‌ಗೆ ಬಂದು ನೋಡಿದಾಗ ವಿಕಾಸ್ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಮೃತನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಷಕರು ಮತ್ತು ಪೊಲೀಸರ ನಡುವೆ ವಾಬ್ದಾಡ ನಡೆದಿದೆ. ಮೃತನ ಸಂಬಂಧಿಗಳು ಹಾಸ್ಟೆಲ್‌ಗೆ ನುಗ್ಗಿ, ಪೀಠೋಪಕರಣ ಧ್ವಂಸಗೊಳಿಸಿದ್ದಾರೆ.
ಆಡಳಿತ ಮಂಡಳಿಯ ಮುಖ್ಯಸ್ಥರು ಬರುವವರೆಗೂ ಮೃತದೇಹ ತೆಗೆಯಲು ಬಿಡುವುದಿಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದಾರೆ. ಘಟನೆ ನಡೆದು ಮೂರು ಗಂಟೆಯಾದರೂ ಮಂಡಳಿಯ ಯಾರೊಬ್ಬರೂ ಬಂದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಷಕರನ್ನು ಸಮಾಧಾನಿಸಿರುವ ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.