ದೇಶದಲ್ಲಿ ವಿದ್ಯಾರ್ಥಿನಿಯರು, ಮಕ್ಕಳು ಹಾಗೂ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ದಬ್ಬಾಳಿಕೆಗಳು ನಡೆಯುತ್ತಿವೆ. ಹೆಣ್ಣು ತಾನು ಧರಿಸುವ ಉಡುಪು, ಸೇವಿಸುವ ಆಹಾರ ಹಾಗೂ ವೈಯಕ್ತಿಕ ಸಂಬಂಧಗಳ ಆಯ್ಕೆಯ ಮೇಲೆ ಆಳುವ ಸರ್ಕಾರ ನಿರ್ಬಂಧ ಹೇರುವುದು ಮಹಿಳೆಯರ ಹಕ್ಕುಗಳನ್ನು ಕಿತ್ತುಕೊಳ್ಳುವ ತಂತ್ರವಾಗಿದೆ ಎಂದು ಅಖಿಲ ಭಾರತ ಎಸ್‌ಎಫ್‌ಐ ಸಹ ಕಾರ್ಯದರ್ಸಿ ದಿಪ್ಸೀತಾ ಧರ್ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರಗಿ ನಗರದ ಪಂಡಿತ ರಂಗಮಂದಿರದಲ್ಲಿಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಆಯೋಜಿಸಿದ ವಿದ್ಯಾರ್ಥಿನಿಯರ ಎರಡು ದಿನದ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದರು.
ಎಸ್‌ಎಫ್‌ಐ ಕೇಂದ್ರ ಸಮಿತಿ ಉಪಾಧ್ಯಕ್ಷ ನೀತಿಶ್ ನಾರಾಯಣ್ ಮಾತಾನಾಡಿ, “ದೇಶದಲ್ಲಿ ಹಲವಾರು ಭಾಷೆ, ಜನಾಂಗ, ಧರ್ಮಗಳಿವೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ನೆಲ. ಇಂತಹ ಬಹುತ್ವ ಸಾರುವ ದೇಶದಲ್ಲಿ ಜನಿಸಿದ ನಾವು ದುಡಿಯುವ ವರ್ಗಕ್ಕೆ ಸೇರಿದ್ದೇವೆ. ಯಾವುದೇ ಒಂದು ಭಾಷೆ, ಧರ್ಮ, ಸಂಸ್ಕೃತಿ ಒಂದು ಆಡಳಿತಕ್ಕೆ ಸೇರಿದಲ್ಲ. ಎಸ್‌ಎಫ್‌ಐ ಈ ನೆಲದ ವೈವಿಧ್ಯತೆಯನ್ನು ಎತ್ತಿ ಹಿಡಿಯುತ್ತದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ದೇಶದ ಮಹಿಳೆಯರ ಸುರಕ್ಷತೆಗೆ ಎಸ್‌ಎಫ್‌ಐ ಸದಾ ಮುಂದಾಗುತ್ತದೆ” ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಶಿವಶರಣಪ್ಪ ಮೂಳೆಗಾಂವ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಎಸ್‌ಎಫ್‌ಐ ಎಂದರೆ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ಕಟ್ಟುವ ಸಂಘಟನೆ. ವಿದ್ಯಾರ್ಥಿಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಗಟ್ಟಿಯಾಗಿ ದನಿಯೆತ್ತಿ ಪ್ರತಿರೋಧದ ಮೂಲಕ ಪರಿಹಾರ ಕಂಡುಕೊಳ್ಳುವುದು ಈ ಸಂಘಟನೆ ಕಲಿಸುತ್ತದೆ” ಎಂದು ನುಡಿದರು.
ಸಮಾವೇಶಕ್ಕೂ ಮುನ್ನ ನಗರದ ತಿಮ್ಮಾಪುರ್ ವೃತ್ತದಿಂದ ಜಗತ್ ವೃತ್ತದವರೆಗೆ ಮೆರವಣಿಗೆ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ʼಶಿಕ್ಷಣದ ಹಕ್ಕಿಗಾಗಿ, ಘನತೆಯ ಭವಿಷ್ಯಕ್ಕಾಗಿʼ ಎಂಬ ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜ್ಯ ಮಹಿಳಾ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ; ಅಹವಾಲು ಆಲಿಸಿದ ಅಧಿಕಾರಿಗಳು
ಸಮಾವೇಶದಲ್ಲಿ ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿ ಸೇರಿದಂತೆ ಪ್ರಮುಖರಾದ ಭೀಮನಗೌಡ ಸುಂಕೇಶ್ವರಹಾಳ, ಅಮರೇಶ ಕಡಗದ, ಡಾ. ಶರಣಪ್ಪ ಸೈದಾಪೂರ, ಡಾ. ಸಂತೋಷ ಹುಂಪ್ಳಿ, ಬೃಂದಾ ಧನ್ನಿ, ಮಾಲಾಶ್ರೀ ಮತ್ತಿಮೂಡ ಇದ್ದರು. ಮೇಘಾ ಸ್ವಾಗತಿಸಿದರು, ಸುಜಾತ ನಿರೂಪಿಸಿದರು, ಸುಕನ್ಯಾ ವಂದಿಸಿದರು.