ಮೌಢ್ಯ ತೊರೆದು ವಿಜ್ಞಾನದ ತಳಹದಿಯ ಮೇಲೆ ಮಕ್ಕಳು ಜೀವನ ರೂಪಿಸಿಕೊಳ್ಳಬೇಕು ಎಂದು ಸಮಗ್ರ ಶಿಕ್ಷಣ ಯೋಜನಾ ಸಮನ್ವಯಾಧಿಕಾರಿ ಗುಂಡಪ್ಪ ಹುಡಗೆ ಸಲಹೆ ನೀಡಿದರು.
ಔರಾದ ತಾಲೂಕಿನ ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ರಜೆ ಸದ್ಬಳಕೆ ಹಿನ್ನೆಲೆ ಬುಧುವಾರ ಆಯೋಜಿಸಿರುವ ʼವೈಜ್ಞಾನಿಕ ಚಿಂತನೆ ಹಾಗೂ ಅಧ್ಯಯನʼ ಶಿಬಿರದಲ್ಲಿ ಅವರು ಮಾತನಾಡಿದರು.
“ಪ್ರತಿಯೊಂದು ವೈಜ್ಞಾನಿಕ ದೃಷ್ಟಿಕೋನದಿಂದ ಕಲಿಯಬೇಕು. ಸ್ವಾಮಿ ವಿವೇಕಾನಂದ, ಡಾ. ಬಿ.ಆರ್ ಅಂಬೇಡ್ಕರ್, ಮಹಾತ್ಮ ಬುದ್ದ, ಬಸವ, ಗಾಂಧೀಜಿ, ಸಿ.ವಿ ರಾಮನ್, ಅಬ್ದುಲ್ ಕಲಾಂ ಸೇರಿದಂತೆ ಇನ್ನಿತರ ಸಾಧಕರ ವೈಜ್ಞಾನಿಕ ಹಾಗೂ ವೈಚಾರಿಕ ವಿಚಾಧಾರೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು” ಹೇಳಿದರು.
ಪ್ರೌಢಶಾಲಾ ಶಿಕ್ಷಕ ಸಂಘದ ನಿರ್ದೇಶಕ ಶಾಮಸುಂದರ್ ಖಾನೂಪೂರೆ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮನುಷ್ಯತ್ವದ ಕೊರತೆ ಎದ್ದು ಕಾಣುತ್ತಿದೆ. ಮಾಢ್ಯದಿಂದ ಮುಗ್ಧ ಜನರು ಯಾವೆಲ್ಲ ರೀತಿ ವಂಚನೆಗೆ ಒಳಗಾಗುತ್ತಾರೆ ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಮಕ್ಕಳಿಗೆ ತಿಳಿಸಿದರು.
ಶಿಬಿರದ ಸಂಯೋಜಕ ಶಿಕ್ಷಕ ಬಾಲಾಜಿ ಅಮರವಾಡಿ ಮಾತನಾಡಿ, “ಮಕ್ಕಳು ಚಿಕ್ಕಂದಿನಿಂದಲೇ ವೈಜ್ಞಾನಿಕವಾಗಿ ಯೋಚಿಸಲು ಶಕ್ತರಾಗಬೇಕು ಮತ್ತು ದಸರಾ ರಜೆಯ ಸದುಪಯೋಗವಾಗಲಿ ಎಂಬ ಉದ್ದೇಶದಿಂದ ಈ ಶಿಬಿರ ಏರ್ಪಡಿಸಲಾಗಿದ್ದು, ಅಕ್ಟೋಬರ್ 18 ರವರೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರಾಫ್ಟ್, ಯೋಗ ಮತ್ತು ಧ್ಯಾನ ಸೇರಿದಂತೆ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಚೆಂಡು ಹೂ ಕೃಷಿ : ಉತ್ತಮ ಆದಾಯದ ನಿರೀಕ್ಷೆಯಲ್ಲಿ ಯುವ ರೈತ
ಕಾರ್ಯಕ್ರಮದಲ್ಲಿ ಕೊಳ್ಳೂರ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುರೇಶ ಪಾಂಡ್ರೆ, ಮಾಜಿ ಸೈನಿಕ ನಾಗುರಾಂ, ಸಿಆರ್‌ಪಿ ಮಹಾದೇವ ಘೂಳೆ, ಅನೀಲಕುಮಾರ ಮಾಟೆ, ಎಸ್‌ಡಿಎಂಸಿ ಸದಸ್ಯ ಶಿವಾನಂದ ಬಿರಾದಾರ್, ಮುಖ್ಯ ಶಿಕ್ಷಕ ಪ್ರಭು ಬಾಳೂರೆ ಹಾಗೂ ಶಿಕ್ಷಕರಾದ ಅಂಕುಶ ಪಾಟೀಲ್, ಸಿದ್ದೇಶ್ವರಿ, ರೂಪಾ, ಕಿರಣ ಹಿಪ್ಪಳಗಾವೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.