ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ಇಂದಿನಿಂದ(ಅ.6) ಆರಂಭಗೊಂಡಿದ್ದು, ಆನ್‌ಲೈನ್ ಮೂಲಕ ನೋಂದಾಯಿಸಿದವರಿಗೆ ಮಾತ್ರ ಚಾರಣಕ್ಕೆ ಅವಕಾಶ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳಲು ಕುಕ್ಕೆ ಸಮೀಪದ ದೇವರಗದ್ದೆ ಎಂಬಲ್ಲಿಂದ ಅರಣ್ಯ ಪ್ರವೇಶಿಸಬೇಕು. ಸೋಮವಾರ ಪೇಟೆ ಬಳಿಯಿಂದಲೂ ಚಾರಣ ಆರಂಭಿಸಬಹುದು. ಕಳೆದ ವರ್ಷ ಕುಮಾರ ಪರ್ವತ ಚಾರಣಕ್ಕೆ ಭಾರೀ ಸಂಖ್ಯೆಯ ಚಾರಣಿಗರು ಬಂದಿದ್ದರಿಂದ ಸೀಮಿತ ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್, ಹೊಸ ಮಾರ್ಗಸೂಚಿಯೊಂದಿಗೆ ಪರಿಸರ ಸ್ನೇಹಿ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಈ ವರ್ಷದಿಂದ ಅರಣ್ಯ ಇಲಾಖೆಯ ಅರಣ್ಯ ವಿಹಾರ ಎಂಬ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಚಾರಣ ಕೈಗೊಳ್ಳಬಹುದು. ದಿನಕ್ಕೆ 335 ಚಾರಣಿಗರಿಗೆ ಮಾತ್ರ ಅವಕಾಶ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ – ಕುಮಾರಪರ್ವತ, ಕೊಡಗಿನ ಬೀದಹಳ್ಳಿ – ಕುಮಾರಪರ್ವತ – ಬೀದಹಳ್ಳಿ, ಬೀದಹಳ್ಳಿ- ಕುಮಾರಪರ್ವತ – ಸುಬ್ರಹ್ಮಣ್ಯ ಎಂಬ ಮೂರು ಆಯ್ಕೆಗಳನ್ನು ಪ್ರವೇಶ ಚಾರಣ ಮಾರ್ಗ ಆಯ್ಕೆ ಆನ್‌ಲೈನ್ ಬುಕ್ಕಿಂಗ್‌ನಲ್ಲಿ ಸೂಚಿಸಲಾಗಿದೆ.

ಕುಮಾರ ಪರ್ವತಕ್ಕೆ ಚಾರಣ ಕೈಗೊಳ್ಳುವವರು ಗಿರಿಗದ್ದೆಯಲ್ಲಿ ವಾಸ್ತವ್ಯ ಮಾಡಿ ಮರುದಿನ ಬೆಳಗ್ಗೆ ಕುಮಾರ ಪರ್ವತದ ಮೇಲಿನ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ, ಈ ಬಾರಿ ಗಿರಿಗದ್ದೆಯಲ್ಲಿ ತಂಗುವುದನ್ನು ನಿರ್ಬಂಧಿಸಲಾಗಿದೆ.
ಕುಮಾರ ಪರ್ವತ ಚಾರಣ ಪ್ರವೇಶಕ್ಕೆ ಬೆಳಗ್ಗೆ 6ರಿಂದ 9ರ ಅವಧಿಯಲ್ಲಿ ಪ್ರವೇಶಿಸಬೇಕು. 11 ಗಂಟೆಗೆ ಗಿರಿಗದ್ದೆಯಿಂದ ಮೇಲಿನ ಪ್ರದೇಶಕ್ಕೆ ತೆರಳಬೇಕು. ಸಂಜೆ 6 ಗಂಟೆಗೂ ಮುನ್ನ ಚಾರಣದಿಂದ ನಿರ್ಗಮಿಸಬೇಕು. ಚಾರಣದ ಮಧ್ಯೆ ತಂಗಲು ಅವಕಾಶ ಇಲ್ಲ ಎಂಬುದೂ ಸೇರಿದಂತೆ ವಿವಿಧ ಮಾರ್ಗಸೂಚಿಗಳನ್ನು ಅರಣ್ಯ ಇಲಾಖೆ ಹೊರಡಿಸಿದೆ. ಅವುಗಳನ್ನು ಪಾಲಿಸದಿದ್ದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನೂ ಕೂಡ ಚಾರಣಿಗರಿಗೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು | ಮಾಜಿ ಶಾಸಕ ಮೊಯ್ದಿನ್ ಬಾವ ಸಹೋದರ ನಾಪತ್ತೆ: ಸೇತುವೆ ಮೇಲೆ ಕಾರು ಪತ್ತೆ
ಗಿರಿಗದ್ದೆಯಲ್ಲಿ ಈ ಬಾರಿ ತಂಗಲು ಅವಕಾಶ ನಿರ್ಬಂಧಿಸಿರುವುದರಿಂದ ಸುಬ್ರಹ್ಮಣ್ಯದಿಂದ ಸುಮಾರು 12 ಕಿ.ಮೀ. ದೂರದ ಕಠಿಣ ಹಾದಿಯ ಕುಮಾರ ಪರ್ವತವನ್ನು ಗರಿಷ್ಠ 12 ಗಂಟೆಯೊಳಗೆ ವೀಕ್ಷಿಸಿ ಹಿಂದಿರುಗುವಂತೆ ಚಾರಣಿಗರಿಗೆ ನಿರ್ದೇಶನ ನೀಡಲಾಗಿದೆ.
ಆನ್‌ಲೈನ್ ಮೂಲಕ ನೋಂದಣಿ ಮಾಡಬೇಕಾದ ವೆಬ್‌ಸೈಟ್ ವಿಳಾಸ: ನೋಂದಣಿ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
https://aranyavihaara.karnataka.gov.in/login
