ಬಳ್ಳಾರಿ ಮತ್ತು ಬೆಳಗಾವಿಯ ಸರ್ಕಾರಿ ಆಸ್ಪತ್ರೆಳಲ್ಲಿ ಸೇರಿದಂತೆ ಈವರೆಗೆ ರಾಜ್ಯಾದ್ಯಂತ ಬಾಣಂತಿಯರ ಸಾವು ಸಂಭವಿಸಿರುವ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ವಿಜಯಪುರ ನಗರದಲ್ಲಿ ಪತ್ರಿಕೆ ಪ್ರಕಟಣೆ ನೀಡಿದ ಅವರು, “ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರ ದುರಂತಮಯ ಸಾವುಗಳು ರಾಜ್ಯದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿರುವುದು ಅತ್ಯಂತ ವಿಪರ್ಯಾಸದ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
“ಹಿಂದಿನ ಬಿಜೆಪಿ ಆಳ್ವಿಕೆಯ ಸಂದರ್ಭದಲ್ಲೂ ಸೇರಿದಂತೆ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 3000ಕ್ಕೂ ಹೆಚ್ಚು ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಮುಖ್ಯಮಂತ್ರಿಗಳೇ ಸದನದಲ್ಲಿ ಉಲ್ಲೇಖಿಸಿದ್ದಾರೆ. ಬಿಜೆಪಿಯ ಆಳ್ವಿಕೆಯಲ್ಲೂ ಬಾಣಂತಿಯರು ಆಸ್ಪತ್ರೆಗಳಲ್ಲಿ ಜೀವ ಬಿಟ್ಟಿದ್ದಾರೆ ಎಂಬುದು ಕಾಂಗ್ರೆಸ್ ಸರ್ಕಾರವನ್ನು ಯಾವ ರೀತಿಯಿಂದಲೂ ಸಮರ್ಥಿಸಿದಂತೆ ಆಗುವುದಿಲ್ಲ. ಬದಲಿಗೆ ಎರಡೂ ಪಕ್ಷಗಳಿಗೆ ಜನರ ಜೀವದ ಕುರಿತು ಇರುವ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ” ಎಂದರು.
“ಬಳ್ಳಾರಿಯಲ್ಲಿ ಸಂಭವಿಸಿದ ಸಾವುಗಳಿಗೆ ಕಳಪೆ ಗುಣಮಟ್ಟದ ಔಷಧಿ ಕಾರಣವೆಂದು ಹೇಳಲಾಗುತ್ತಿದೆ. ಹೌದಾದರೆ ಇಂತಹ ಔಷಧಿಯನ್ನು ಖರೀದಿಸಲು ಅನುಮತಿ ಕೊಟ್ಟವರು ಯಾರು?, ಯಾವ ಕಾರಣಕ್ಕಾಗಿ? ಎಂಬುದೂ ಕೂಡ ಹೊರಬರಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಹೆರಿಗೆಗಾಗಿ ಬರುವ ಬಡಮಹಿಳೆಯರ ಜೀವವನ್ನು ಅಗ್ಗವಾಗಿ ಪರಿಗಣಿಸಿರುವುದು ಅಕ್ಷಮ್ಯ ಅಪರಾಧ. ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿಓದಿದ್ದೀರಾ? ಚಳ್ಳಕೆರೆ ನಗರಸಭೆಯಲ್ಲಿ ಮೂಲಸೌಕರ್ಯ ಕೊರತೆ; ₹24 ಲಕ್ಷ ವೆಚ್ಚದಲ್ಲಿ ವಿದೇಶಿ ಪ್ರವಾಸ ಕೈಗೊಂಡಿರುವ ಅಧಿಕಾರಿಗಳು
“ಜತೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಅವಶ್ಯಕ ವೈದ್ಯರುmaternal deaths, ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಮತ್ತು ಪ್ರಯೋಗಾಲಯಗಳಲ್ಲಿ ಸೂಕ್ತ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲದೆ, ಆರೋಗ್ಯ ಇಲಾಖೆಯಲ್ಲಿರುವ ಭ್ರಷ್ಟಾಚಾರವನ್ನು ತಡೆಗಟ್ಟಿ, ಜನರ ಮೂಲಭೂತ ಅಗತ್ಯವಾದ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಬೇಕು” ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಪರವಾಗಿ ಒತ್ತಾಯಿಸಿದರು.