ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ ಪ್ರಕರಣ ಸೂಕ್ತ ತನಿಖೆ ನಡೆಸಲು ಎಸ್‌ಎಫ್‌ಐ ಆಗ್ರಹಿಸಿದೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯ ಕಾರ್ಯಕರ್ತರು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಆಲದಕಟ್ಟಿ ಗ್ರಾಮದ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ (16) ತಾಲೂಕಿನ ದೂದಿಹಳ್ಲಿಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ, ಮನೆಗೆ ಬಂದಿದ್ದ ವಿದ್ಯಾರ್ಥಿನಿ ಜುಲೈ 2ರಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಎಸ್ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಸವರಾಜ್ ಎಸ್. ಮಾತನಾಡಿ, ʼಸಾವಿಗೂ ಮುನ್ನ ವಿದ್ಯಾರ್ಥಿನಿ ಬರೆದ ಪತ್ರದಲ್ಲಿ ತನ್ನ ಸಾವಿಗೆ ಸಹಪಾಠಿ ಹಾಗೂ ಆಕೆಯ ತಾಯಿಯ ಕಿರುಕುಳವೇ ಕಾರಣ ಎಂಬ ಮಾಹಿತಿ ಇದೆ. ಹೀಗಾಗಿ, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಹಾಗೂ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಬೇಕು. ವಸತಿ ನಿಲಯ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕುʼ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ನಾಗಮ್ಮನವರ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ʼವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ಕುರಿತು ಸಮಗ್ರ ಮಾಹಿತಿ ಪಡೆದು, ಸೂಕ್ತ ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗುವುದುʼ ಎಂದರು.
ಈ ಸುದ್ದಿ ಓದಿದ್ದೀರಾ? ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ
ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ರೇವಣಸಿದ್ದೇಶ್, ಕಾರ್ಯದರ್ಶಿ ನವೀನ ಎಚ್.ಟಿ. ಉಪಸ್ಥಿತರಿದ್ದರು.