ಉಡುಪಿಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿಯು ಇಂದು ತುರ್ತು ಸಭೆ ನಡೆಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು ಮಲ್ಪೆಯಲ್ಲಿ ದಲಿತ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ದೌರ್ಜನ್ಯ ಎಸಗಿದ ಹೀನ ಕ್ರತ್ಯವನ್ನು ಸಮರ್ಥಿಸಿಕೊಳ್ಳುತ್ತಿರುವ ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ರಂತ ರಾಜಕಾರಣಿಗಳ ಕೀಳು ಮನಸ್ಥಿತಿಯ ಅನಾವರಣ ಮಾಡಿದ್ದಾರೆ. ರಾಜಕೀಯವಾಗಿ ತಮ್ಮ ಟಿಆರ್ ಪಿ ಯನ್ನು ಹೆಚ್ಚಿಸಿಕೊಳ್ಳಲು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುವ ಈ ರಾಜಕಾರಣೀಗಳು ಮೊಗವೀರ ಸಮೂದಾಯವನ್ನು ದಲಿತರ ವಿರುದ್ಧ ರೊಚ್ಚಿಗೇಳುವಂತೆ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದಾರೆ ಮಾತ್ರವಲ್ಲ ಅಸ್ಪೃಶ್ಯ ಸಮುದಾಯಕ್ಕೆ ಬೆದರಿಕೆ ಹಾಕುವ ಕಾರ್ಯವನ್ನೂ ಮಾಡುತ್ತಿದ್ದಾರೆ ಎಂದರು. ಈ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಮೋದ್ ಮಧ್ವರಾಜ್ ಮೇಲೆ ಸುಮೊಟೋ ಕೇಸ್ ದಾಖಲಿಸಿದ ಪೋಲೀಸ್ ಇಲಾಖೆಯನ್ನು ಅಬಿನಂಧಿಸಿದರು.

ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮಾತನಾಡಿ ಬಂದರಿನಲ್ಲಿ ಕೆಲಸ ಮಾಡುವ ದಲಿತ ಸಮುದಾಯದವರಿಗೆ ತೊಂದರೆ ಆದರೆ ಸುಮ್ಮನೇ ಕೂರುವ ಪ್ರಶ್ನೆಯೇ ಇಲ್ಲ, ಈಗಾಗಲೇ ಲಂಬಾಣಿ ಸಮುದಾಯದವರನ್ನು ಬಂದರಿನಿಂದ ಮೊಗವೀರರು ಓಡಿಸುತ್ತಿರುವ, ಬೆದರಿಕೆ ಹಾಕುತ್ತಿರುವ ಸುದ್ದಿ ಬಂದಿದೆ, ಜಿಲ್ಲಾಡಳಿತ, ಪೋಲಿಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತಿಭಟನೆಯಲ್ಲಿ ಕಿರುಚಾಡಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಹೆಸರು ಪ್ರಸ್ತಾಪಿಸಿ ಬೈಯ್ಯುವ ಬದಲು ಯಾವುದೇ ಚಾನಲ್ ನಲ್ಲಿ ಚರ್ಚೆಗೆ ಬಂದರೆ ನಿಮಗೆ ಸರಿಯಾದ ಉತ್ತರ ಕೊಡಲು ನಾವು ಮೂವರೂ ತಯಾರಿದ್ದೇವೆ ಎಂದರು.
ದೇಶದ ಯಾವುದೇ ಮೂಲೆಯಲ್ಲಿ ಶೋಷಿತರ ಮೇಲೆ ದೌರ್ಜನ್ಯಗೊಳಗಾದಗ ಅದರ ವಿರುದ್ಧ ಹೋರಾಡುವುದು ಒಂದು ಪ್ರಗತಿಪರ ಸಂಘಟನೆಯಾದ ನಮ್ಮ ಆದ್ಯ ಕರ್ತವ್ಯ ಎಂದರು.
ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಮಾತನಾಡಿ ಮಲ್ಪೆ ಬಂದರು ಯಾರೊಬ್ಬರ ಸ್ವಂತ ಆಸ್ತಿ ಅಲ್ಲಾ, ಬಂದರು ಸರಕಾರದ ಸ್ವತ್ತು, ಅಲ್ಲಿ ಎಲ್ಲರಿಗೂ ದುಡಿದು ತಿನ್ನುವ ಹಕ್ಕಿದೆ, ಪಾಳೇಗಾರಿಕೆ ಮಾಡಲು ಇದು ಉತ್ತರ ಪ್ರದೇಶ ಅಥವಾ ಬಿಹಾರ ಅಲ್ಲಾ. ಮಲ್ಪೆ ಘಟನೆಯಲ್ಲಿ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿ ಡಾ: ಅರುಣ ಕುಮಾರ್ ರವರು ಕ್ಲಪ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಅವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಅಭಿನಂಧಿಸುತ್ತದೆ. ಮತ್ತು ಈ ನ್ಯಾಯಯುತ ಹೋರಾಟದಲ್ಲಿ ದಲಿತ ಸಂಘರ್ಷ ಸಮಿತಿಯು ಪೋಲಿಸ್ ವರಿಷ್ಠಾಧಿಕಾರಿಯವರ ಬೆಂಬಲಕ್ಕೆ ನಿಲ್ಲುತ್ತದೆ.
ಬುಧ್ಧಿವಂತರ ಸಹಬಾಳ್ವೆಯ ಜಿಲ್ಲೆಯಾದ ಉಡುಪಿಯಲ್ಲಿ ಈ ಪಾಳೇಗಾರಿಕೆಯ ಗುಂಡಾಗಿರಿ ಸಂಪೂರ್ಣವಾಗಿ ಹತ್ತಿಕ್ಕಬೇಕು ಎಂದರು. ಸಭೆಯಲ್ಲಿ ದ.ಸಂ.ಸ.ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ರಾಜೇಂದ್ರ ಮಾಸ್ಟರ್ ಬೆಳ್ಳೆ, ಮಂಜುನಾಥ ನಾಗುರು, ಸುರೇಶ ಹಕ್ಲಾಡಿ, ಭಾಸ್ಕರ ಮಾಸ್ಟರ್, ಶ್ರೀಧರ ಕುಂಜಿಬೆಟ್ಟು, ಅಣ್ಣಪ್ಪ ನಕ್ರೆ, ತಾಲೂಕು ಸಂಚಾಲಕರಾದ ರಾಜು ಬೆಟ್ಟಿನಮನೆ, ಮಂಜುನಾಥ್ ಬಾಳ್ಕುದ್ರು, ರಾಘವ ಬೆಳ್ಳೆ, ಹರೀಶ್ಚಂದ್ರ ಬಿರ್ತಿ, ಶಿವರಾಮ ಕಾಪು, ಕುಸುಮ ಹಂಗಾರಕಟ್ಟೆ, ಶಿವಾನಂದ ಬಿರ್ತಿ, ರಮೇಶ ಮರವಂತೆ, ಕ್ರಷ್ಣ, ಸುರೇಶ ಬಾರ್ಕೂರು, ಶಿವರಾಜ್ ಬೈಂದೂರು, ರತ್ನಾಕರ ಕುಂಜಿಬೆಟ್ಟು ಉಪಸ್ಥಿತರಿದ್ದರು.