ಉಡುಪಿಯ ಡಿ ಎಚ್ ಒ ಬಸವರಾಜ ಜಿ ಹುಬ್ಬಳ್ಳಿ ಅವರ ವರ್ಗಾವಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿರುವ ಸನ್ಮಾನ್ಯ ಯಶಪಾಲ್ ಸುವರ್ಣ ರವರೇ ಅದೇ ಜಿಲ್ಲಾಸ್ಪತ್ರೆಯಲ್ಲಿ ಅರ್ಹತೆ ಇಲ್ಲದಿದ್ದರೂ ನಿಯಮಬಾಹಿರವಾಗಿ ಜಿಲ್ಲಾ ಸರ್ಜನ್ ಆಗಿ ಜಾಂಡಾ ಊರಿರುವ ಹೆಚ್ ಎಸ್ ಅಶೋಕ್ ಅವರ ವರ್ಗಾವಣೆಗೆ ಆಗ್ರಹಿಸಿ ಯಾಕೆ ಪತ್ರ ಬರೆದಿಲ್ಲಾ ? ಬರೀ ಡಿ ಹೆಚ್ ಒ ಅವರನ್ನು ಮಾತ್ರ ವರ್ಗಾವಣೆಗೆ ಆಗ್ರಹಿಸಿದ ಅಸಲಿಯತ್ತೇನು ? ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಯಮಬಾಹಿರವಾಗಿ ಉಡುಪಿ ಜಿಲ್ಲಾ ಸರ್ಜನ್ ಹುದ್ದೆಯಲ್ಲಿರುವ ಹೆಚ್ ಎಸ್ ಅಶೋಕ್ ಅವರು ಈ ಹಿಂದೆ ಮಂಗಳೂರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ದಲಿತ ಯುವತಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿ, ಅದು ತನಿಖೆಯಿಂದ ಸಾಬೀತಾಗಿ ಐದು ಇಂಕ್ರಿಮೆಂಟ್ ಕಟ್ ಮಾಡಿದ್ದಾರೆ. ಉಡುಪಿಯಲ್ಲೂ ಸಹ ತಮ್ಮ ಸಹೋದ್ಯೋಗಿಗಳಿಗೆ ತೊಂದರೆಕೊಡುವ ವಿಚಾರದಲ್ಲಿ ಮೌಕಿಕ ದೂರುಗಳು ಕೇಳಿಬರುತ್ತಿವೆ, ಅದೂ ಅಲ್ಲದೇ ಹೆಚ್ ಎಸ್ ಅಶೋಕ್ ಅವರಿಗೆ ಈಗಾಗಲೇ ವರ್ಗಾವಣೆ ಆಗಿದ್ದು, ವರ್ಗಾವಣೆಗೆ ತಡೆಯಾಜ್ಞೆ ಕೋರಿ ಕೆಎಟಿ ಗೆ ಹೋಗಿದ್ದೂ ಈಗ ಅಲ್ಲೂ ಸಹ ತಡೆಯಾಜ್ಞೆ ರದ್ದಾಗಿದೆ.
ಇಷ್ಟೇಲ್ಲಾ ಅವಾಂತರಗಳಿದ್ದರೂ ತಮ್ಮ ಕ್ಷೇತ್ರದಲ್ಲೇ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳಿಗೆ ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಯಾಕೆ ಹಚ್ಚುತ್ತಿದ್ದೀರಿ.ಈ ತಾರತಮ್ಯದ ಹಿಂದೆ ಜಾತೀವಾತ್ಸಲ್ಯದ ವಿಷಬೀಜ ಕಾರ್ಯಾಚರಿಸುತ್ತಿದೆಯೇ ? ಅದೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕ್ರಮವಹಿಸದೇ ಇರಲು ಕಾರಣವೇನು ? ಅದರಲ್ಲೂ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ಜಾಣ ಕುರುಡುತನ ಪ್ರದರ್ಶನ ಮೌನವಾಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ.
ಈ ಕೂಡಲೇ ಜಿಲ್ಲಾ ಸರ್ಜನ್ ಅಶೋಕ್ ಅವರನ್ನು ವರ್ಗಾವಣೆ ಮಾಡದೇ ಇದ್ದರೇ ಮುಂದೆ ಪ್ರತಿಭಟನೆಗೆ ಕರೆಕೊಡುವ ದಿನಗಳು ದೂರವಿಲ್ಲಾ ಎಂದು ಒತ್ತಾಯಿಸಿದ್ದಾರೆ.