ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೀಳಾಗಿ ಮಾತನಾಡಿರುವುದನ್ನು ಖಂಡಿಸಿ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳು ಹೋರಾಟ ಸಮಿತಿಯಿಂದ ಜ.9ರಂದು ಬೀದರ್ ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ʼದಲಿತ್ ಯೂನಿಟಿ ಮ್ಯೂವಮೆಂಟ್ʼ ಬೆಂಬಲ :
ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಅಂಬೇಡ್ಕರ್ ಅವರಿಗೆ ಕೀಳಾಗಿ ಮಾತನಾಡಿದ್ದು ಖಂಡಿಸಿ ಜನವರಿ 9ರಂದು ಬೀದರ್ ಬಂದ್‌ಗೆ ಕರೆ ನೀಡಲಾಗಿದ್ದು, ಈ ಬೃಹತ್ ಹೋರಾಟಕ್ಕೆ ದಲಿತ ಯೂನಿಟಿ ಮ್ಯೂವಮೆಂಟ್ ಸಂಘಟನೆ ಸಂಪೂರ್ಣವಾಗಿ ಬೆಂಬಲಿಸಿ ಎಲ್ಲಾ ಕಾರ್ಯಕರ್ತರು ಬೀದರ್ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಪ್ರಕಾಶ ರಾವಣ, ಜಿಲ್ಲಾಧ್ಯಕ್ಷ ವಿನೀತ್ ಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿರುವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ಹೇಳಿದರು.
ಬೀದರ್ ಬಂದ್‌ಗೆ ಬೆಂಬಲ ಸೂಚಿಸಿದ ಬಿಎಸ್ಪಿ :
ʼಅಂಬೇಡ್ಕರ್ ಅಂಬೇಡ್ಕರ್ ಅನ್ನುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಅಂಬೇಡ್ಕರ ಹೆಸರನ್ನು ಪದೇ ಪದೇ ಉಚ್ಚರಿಸುವ ಬದಲು ದೇವರನ್ನು ಸ್ಮರಿಸಿದರೆ ಏಳೇಳು ಜನ್ಮಗಳಲ್ಲಿ ಸ್ವರ್ಗ ದೊರೆಯುತ್ತಿತ್ತು ಎಂದು ರಾಜ್ಯಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಖಂಡಿಸಿ ಕರೆ ಬೀದರ್ ಬಂದ್‌ಗೆ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ಸಂಪೂರ್ಣ ಬೆಂಬಲ ಸೂಚಿಸಿದ್ದು, ಹೋರಾಟಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕಪೀಲ್ ಗೋಡಬೋಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದಾದ್ಯಂತ ಗ್ರಹ ಸಚಿವ ಅಮಿತ್ ಶಾ ವಿರುದ್ಧ ಬಹುಜನ ಸಮಾಜ ಪಾರ್ಟಿ ಸೇರಿದಂತೆ ಅನೇಕ ದಲಿತಪರ, ಪ್ರಗತಿಪರ ಸಂಘಟನೆಗಳಿಂದ ಹೋರಾಟಗಳು ನಡೆಯುತ್ತಿದ್ದರೂ ಇಲ್ಲಿಯವರೆಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಅಮಿತ್ ಶಾ ರಾಜೀನಾಮೆಗೆ ಮುಂದಾಗುತ್ತಿಲ್ಲ. ಹೀಗಾಗಿ ಬೀದರ್ ಬಂದ್ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಲು ಜಿಲ್ಲೆಯ ಸಮಾಜ ಪರ ಚಿಂತಕರು, ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ ಭಾವಿದೊಡ್ಡಿ, ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹೇಶ್ ಭೋಲಾ ಅವರು ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಸೇವಾ ಸಮಿತಿ ಬೆಂಬಲ :
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ಕರೆ ನೀಡಿದ ಬೀದರ್ ಬಂದ್‌ಗೆ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಘಟಕ ಸಂಪೂರ್ಣ ಬೆಂಬಲ ಸೂಚಿಸಿದೆ.
ದೇಶದ ಎಲ್ಲ ಜಾತಿ, ಧರ್ಮದವರಿಗೆ ಸಂವಿಧಾನ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅವರನ್ನು ರಾಜ್ಯಸಭೆಯಲ್ಲಿ ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಿ, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಬೀದರ್ ಬಂದ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಲೋಕೇಶ ಕಾಂಬಳೆ, ಜಿಲ್ಲಾ ಉಪಾಧ್ಯಕ್ಷ ಸಿದ್ಧಾರ್ಥ್ ನಾಟೀಕರ್ ಹಾಗೂ ನಿಲೇಶ್ ಮೇಲಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಚಿಂಚೋಳಿ ಬಂದ್‌ಗೆ ಉತ್ತಮ ಸ್ಪಂದನೆ : ಅಮಿತ್ ಶಾ ಅವರ ಅಣಕು ಶವಯಾತ್ರೆ
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಡಿಸೆಂಬರ್ 24 ರಂದು ಬೀದರ್ ನಗರದಲ್ಲಿ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್‌ವಾದಿಳಗಳ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಅಮಿತ್ ಶಾ ದೇಶದ ಜನರ ಕ್ಷಮೆಯಾಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆಗೆ ನೀಡಬೇಕೆಂದು ಒಂದು ವಾರದ ಗಡುವು ನೀಡಲಾಗಿತ್ತು. ಆ ಅವಧಿ ಮುಗಿದಿದ್ದರೂ ಅಮಿತ್ ಶಾ ಕ್ಷಮೆಯಾಚಿಸಿಲ್ಲ, ರಾಜೀನಾಮೆ ನೀಡಲಿಲ್ಲ. ಹೀಗಾಗಿ ಜನವರಿ 9 ರಂದು ಬೀದರ್ ಬಂದ್‌ಗೆ ಕರೆ ನೀಡಲಾಗಿದೆ. ವಿವಿಧ ಸಂಘ-ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್‌ವಾದಿಳಗಳ ಹೋರಾಟ ಸಮಿತಿ ಅಧ್ಯಕ್ಷ ಉಮೇಶಕುಮಾರ್ ಸ್ವಾರಳ್ಳಿಕರ್ ಹೇಳಿದ್ದಾರೆ.