ಕರ್ನಾಟಕದ ಪಾರಂಪರಿಕ ಗ್ರಾಮೀಣ ಕ್ರೀಡೆ ಕಂಬಳ ಹಾಗೂ ತಮಿಳುನಾಡಿನ ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡುವ ಕಾನೂನುಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ನ ಸಂವಿಧಾನಪೀಠ ವಜಾಗೊಳಿಸಿದೆ.
ನ್ಯಾ. ಕೆ ಎಂ ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ಪ್ರಕಟಿಸಿದೆ.
ಜಲ್ಲಿಕಟ್ಟು ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಶಾಸಕಾಂಗ ಘೋಷಿಸಿದಾಗ, ನ್ಯಾಯಾಂಗವು ವಿಭಿನ್ನ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಹೇಳಿದೆ.
ತಾವು ನೀಡಿರುವ ತೀರ್ಪು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಂಬಳ ಹಾಗೂ ಎತ್ತಿನಗಾಡಿ ಮೇಲಿನ ಕಾನೂನುಗಳಿಗೂ ಅನ್ವಯಿಸುತ್ತದೆ ಹಾಗೂ ಈ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪೀಠವು ಹೇಳಿದೆ.
ತಮಿಳುನಾಡಿನಲ್ಲಿ ಗೂಳಿ ಪಳಗಿಸುವ ಕ್ರೀಡೆಗೆ ಅನುಮತಿ ನೀಡಿದ ರಾಜ್ಯ ಕಾನೂನನ್ನು ಪ್ರಶ್ನಿಸಿ ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಸೇರಿದಂತೆ ಹಲವು ಸಂಘಸಂಸ್ಥೆಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು.
ಈ ಸುದ್ದಿ ಓದಿದ್ದೀರಾ? ಅಹಿಂದ ನಾಯಕ ಸಿದ್ದರಾಮಯ್ಯ: ನಡೆದು ಬಂದ ಹಾದಿ
2017ರಲ್ಲಿ ಪ್ರಾಣಿಗಳ ಮೇಲಿನ ಹಿಂಸೆ ತಡೆಯುವಂತೆ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದ ಗಣನೀಯ ಪ್ರಶ್ನೆಗಳನ್ನು ಎತ್ತಲಾಗಿತ್ತು. ಆದಕಾರಣ ದೊಡ್ಡ ಪೀಠದಿಂದ ಈ ವಿಚಾರವನ್ನು ತೀರ್ಮಾನಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು. ಅಲ್ಲದೆ ದೊಡ್ಡ ಪೀಠದಿಂದ ನಿರ್ಣಯಿಸಬೇಕಾದ ಐದು ಪ್ರಶ್ನೆಗಳನ್ನು ರೂಪಿಸಿತ್ತು.
ಜಲ್ಲಿಕಟ್ಟಿನಲ್ಲಿ ಯಾರೂ ಯಾವುದೇ ಆಯುಧವನ್ನು ಬಳಸುವುದಿಲ್ಲ. 2014ರ ತನ್ನ ತೀರ್ಪಿನಲ್ಲಿ, ಜಲ್ಲಿಕಟ್ಟು ಕಾರ್ಯಕ್ರಮಗಳು ಅಥವಾ ಎತ್ತಿನ-ಗಾಡಿ ಓಟದ ಪ್ರದರ್ಶನಕ್ಕಾಗಿ ಎತ್ತುಗಳನ್ನು ಬಳಸಲಾಗುವುದಿಲ್ಲ ಎಂದು ಹೇಳಿದೆ.
ಜಲ್ಲಿಕಟ್ಟು ಒಂದು ಗೂಳಿಯನ್ನು ಪಳಗಿಸುವ ಕ್ರೀಡೆಯಾಗಿದ್ದು, ತಮಿಳುನಾಡಿನಲ್ಲಿ ಪೊಂಗಲ್ ಸುಗ್ಗಿಯ ಹಬ್ಬದಲ್ಲಿ ಸಾಂಪ್ರದಾಯಿಕವಾಗಿ ಆಡಲಾಗುತ್ತದೆ.
ಕಂಬಳ, ಕರ್ನಾಟಕದ ಕರಾವಳಿಯ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲೂ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಕಂಬಳ ಅಪ್ಪಟ ನೆಲದ ಕ್ರೀಡೆ. ನವೆಂಬರ್ನಿಂದ ಏಪ್ರಿಲ್ ತನಕ ನಡೆಯುವ ಈ ಕ್ರೀಡೆ ಪ್ರತೀ ವಾರಾಂತ್ಯ ಶನಿವಾರ ಬೆಳಗ್ಗೆ ಆರಂಭಗೊಂಡು ಭಾನುವಾರ ಸಂಜೆ ತನಕ ನಡೆಯುತ್ತದೆ. ಕೆಲವೊಮ್ಮೆ ಕೋಣಗಳ ಸಂಖ್ಯೆ ಹೆಚ್ಚಾದರೆ ತಡರಾತ್ರಿಯ ತನಕವೂ ಮುಂದುವರಿಯುತ್ತದೆ.
ಕಂಬಳ ಕ್ರೀಡೆಯಲ್ಲಿ ಅನೇಕ ವಿಭಾಗಗಳೂ ಇದೆ. ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ, ಅಡ್ಡ ಹಲಗೆ, ಕನೆ ಹಲಗೆ, ಸಬ್ ಜ್ಯೂನಿಯರ್ ಹೀಗೆ ಬೇರೆ ಬೇರೆ ವಿಭಾಗದಲ್ಲಿ ಪಂದ್ಯಾಟ ನಡೆಯುತ್ತದೆ.