ಭಾರತೀಯ ರಪ್ತುಗಳ ಮೇಲೆ ಶೇ. 50 ರಷ್ಟು ಸುಂಕಗಳನ್ನು ವಿಧಿಸಿರುವುದಕ್ಕಾಗಿ ಸಿಪಿಐ(ಎಂ) ಪೊಲಿಟ್ ಬ್ಯೂರೋ ಅಮೆರಿಕವನ್ನು ಬಲವಾಗಿ ಖಂಡಿಸಿದೆ. ಈ ಏಕಪಕ್ಷೀಯ ನಡೆ ಸ್ವೇಚ್ಛಾಚಾರಿ, ಸರ್ವಾಧಿಕಾರಿ ನಡೆ ಮತ್ತು ಅಮೆರಿಕದ ಆಡಳಿತದ ಜಗಳಗಂಟ ತಂತ್ರಗಳನ್ನು ಬಿಂಬಿಸುತ್ತದೆ ಎಂದು ಅದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಸ್ತುತ ನಡೆಯುತ್ತಿದ್ದ ವ್ಯಾಪಾರ ಮಾತುಕತೆಗಳ ಸಮಯದಲ್ಲಿ ಅಮೆರಿಕ ಮುಂದಿಟ್ಟ ಎಲ್ಲಾ ಬೇಡಿಕೆಗಳನ್ನು ಸ್ವೀಕರಿಸದಿದ್ದಕ್ಕಾಗಿ ಭಾರತೀಯ ರಫ್ತುಗಳ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಲಾಗುವುದು ಎಂದು ಪ್ರಕಟಿಸಿದ್ದರು. ಇದರ ಜೊತೆಗೆ, ಭಾರತವು ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ದಂಡವಾಗಿ ಹೆಚ್ಚುವರಿ ಶೇಕಡಾ 25 ರಷ್ಟು ವಿಧಿಸಲಾಗಿದೆ. ಸ್ವತಃ ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವೇ ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಮುಂದುವರಿಸುತ್ತಿರುವಾಗ, ಭಾರತದಂತಹ ದೇಶಗಳು ರಷ್ಯಾದೊಂದಿಗೆ ವ್ಯಾಪಾರ ಸಂಬಂಧಗಳನ್ನು ಮುಂದುವರಿಸಿದ್ದಕ್ಕಾಗಿ ಅವುಗಳ ಕೈತಿರುಚಲು ಪ್ರಯತ್ನಿಸುತ್ತಿವೆ.
ಭಾರತ ಸರ್ಕಾರವು ದೃಢವಾಗಿ ನಿಂತು ಅಮೆರಿಕದ ಒತ್ತಡಕ್ಕೆ ಮಣಿಯುದೆ ಅದನ್ನು ಪ್ರತಿರೋಧಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ. ಈ ಸುಂಕ ಹೆಚ್ಚಳಗಳಿಂದಾಗಿ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಿರುವ ಭಾರತೀಯ ರಫ್ತುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.
ಅಮೆರಿಕದ ಜಗಳಕೋರತನದ ವಿರುದ್ಧ ಮತ್ತು ನಮ್ಮ ದೇಶದ ಆರ್ಥಿಕ ಸಾರ್ವಭೌಮತ್ವವನ್ನು ರಕ್ಷಿಸಲು ತಕ್ಷಣ ಪ್ರತಿಭಟನೆಗಳನ್ನು ಸಂಘಟಿಸಬೇಕು ಎಂದು ಸಿಪಿಐ(ಎಂ) ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿರುವ ಭಾಗವಾಗಿ ಉಡುಪಿಯಲ್ಲಿಯೂ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.